- Kannada News Photo gallery Cricket photos Harry Brook Banned from IPL for 2 Years: Withdrawal Penalty Explained
IPL 2025: ನಿಯಮ ಮುರಿದ ಹ್ಯಾರಿ ಬ್ರೂಕ್‌ಗೆ ಐಪಿಎಲ್‌ನಿಂದ 2 ವರ್ಷ ನಿಷೇಧ ಹೇರಿದ ಬಿಸಿಸಿಐ
Harry Brook Banned from IPL for 2 Years: ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾದ ನಂತರ, ಹ್ಯಾರಿ ಬ್ರೂಕ್ ತಮ್ಮ ಹೆಸರನ್ನು ಹಿಂತೆಗೆದುಕೊಂಡ ಕಾರಣ, ಬಿಸಿಸಿಐ ಅವರಿಗೆ ಎರಡು ವರ್ಷಗಳ ನಿಷೇಧ ವಿಧಿಸಿದೆ. ಬಿಸಿಸಿಐನ ಹೊಸ ನೀತಿಯ ಪ್ರಕಾರ, ಹರಾಜಿನಲ್ಲಿ ಆಯ್ಕೆಯಾದ ನಂತರ ಹಿಂದೆ ಸರಿದ ಆಟಗಾರರಿಗೆ ಈ ಶಿಕ್ಷೆ ಅನ್ವಯಿಸುತ್ತದೆ. ಈ ನಿಷೇಧವು 2025ರ ಐಪಿಎಲ್ ಹರಾಜು ಸೇರಿದಂತೆ ಎರಡು ವರ್ಷಗಳವರೆಗೆ ಅನ್ವಯಿಸುತ್ತದೆ.
Updated on:Mar 13, 2025 | 8:47 PM

ಈ ಮೊದಲೆ ಊಹಿಸಿದಂತೆ, ಐಪಿಎಲ್‌ನಿಂದ ಹಿಂದೆ ಸರಿದಿದ್ದ ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ನಿಷೇಧಿಸಲಾಗಿದೆ. ಮಂಡಳಿಯ ಹೊಸ ನೀತಿಯ ಪ್ರಕಾರ, ಬ್ರೂಕ್ ಮುಂದಿನ ಎರಡು ವರ್ಷಗಳ ಕಾಲ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಬಿಸಿಸಿಐ, ಈಗಾಗಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ತಿಳಿಸಿದೆ ಎಂದು ವರದಿಯಾಗಿದೆ.

ವಾಸ್ತವವಾಗಿ, ಬ್ರೂಕ್ ಇತ್ತೀಚೆಗೆ ಕೊನೆಯ ಕ್ಷಣದಲ್ಲಿ ಈ ಬಾರಿಯ ಐಪಿಎಲ್‌ನಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡಿದ್ದರು. ಇದೀಗ ಈ ತಪ್ಪಿಗೆ ಶಿಕ್ಷೆಯಾಗಿ ಬಿಸಿಸಿಐ, ಹ್ಯಾರಿ ಬ್ರೂಕ್‌ಗೆ ನಿಷೇಧದ ಶಿಕ್ಷೆ ವಿಧಿಸಿದೆ. 2 ಕೋಟಿ ರೂ ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 6.25 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.

ವಾಸ್ತವವಾಗಿ 2025 ರ ಐಪಿಎಲ್ ಹರಾಜಿಗೂ ಮುನ್ನ ಬಿಸಿಸಿಐ, ಪಂದ್ಯಾವಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಮಾಡಿತ್ತು. ಆ ನಿಯಮಗಳ ಪ್ರಕಾರ, ಯಾವುದೇ ಆಟಗಾರ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಯಾವುದಾದರೂ ತಂಡವನ್ನು ಸೇರಿಕೊಂಡ ಬಳಿಕ ಪಂದ್ಯಾವಳಿಯಿಂದ ಹಿಂದೆ ಸರಿದರೆ ಅವರನ್ನು 2 ಸೀಸನ್ವರೆಗೆ ಪಂದ್ಯಾವಳಿ ಮತ್ತು ಹರಾಜಿನಲ್ಲಿ ಭಾಗವಹಿಸುವುದರಿಂದ ನಿಷೇಧಿಸಲು ತೀರ್ಮಾನಿಸಲಾಗಿತ್ತು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ಅಧಿಕೃತವಾಗಿ ಇಸಿಬಿ ಮತ್ತು ಹ್ಯಾರಿ ಬ್ರೂಕ್‌ಗೆ 2 ವರ್ಷಗಳ ನಿಷೇಧದ ಬಗ್ಗೆ ತಿಳಿಸಿದೆ. ‘ಬಿಸಿಸಿಐ ತನ್ನ ನೀತಿಯ ಪ್ರಕಾರ, ಬ್ರೂಕ್ ಮೇಲಿನ ಎರಡು ವರ್ಷಗಳ ನಿಷೇಧದ ಕುರಿತು ಇಸಿಬಿ ಮತ್ತು ಬ್ರೂಕ್‌ಗೆ ಅಧಿಕೃತ ಮಾಹಿತಿಯನ್ನು ಕಳುಹಿಸಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ಆದಾಗ್ಯೂ, ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ತನ್ನ ಹೆಸರನ್ನು ಹಠಾತ್ತನೆ ಹಿಂತೆಗೆದುಕೊಂಡಿರುವುದು ಇದೇ ಮೊದಲಲ್ಲ. ಐಪಿಎಲ್ 2024 ಕ್ಕೂ ಮುಂಚೆಯೂ ಅವರು ಇದೇ ರೀತಿ ಪಂದ್ಯಾವಳಿಯಲ್ಲಿ ಆಡಲು ನಿರಾಕರಿಸಿದ್ದರು. ವೈಯಕ್ತಿಕ ಕಾರಣಗಳನ್ನು ನೀಡಿ ಬ್ರೂಕ್ ಐಪಿಎಲ್‌ನಿಂದ ಹಿಂದೆ ಸರಿಯುತ್ತಿರುವುದು ಇದು ಸತತ ಎರಡನೇ ವರ್ಷ. ಆದಾಗ್ಯೂ, ಈ ಬಾರಿ ಬ್ರೂಕ್ ತನ್ನ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದಾರೆ.

ಐಪಿಎಎಲ್ನಿಂದ ಹಿಂದೆ ಸರಿಯುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದ ಬ್ರೂಕ್, ‘ನಾನು ತುಂಬಾ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ, ಇದಕ್ಕಾಗಿ ನಾನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಅದರ ಬೆಂಬಲಿಗರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ' ಎಂದು ಹೇಳಿಕೊಂಡಿದ್ದರು.
Published On - 8:44 pm, Thu, 13 March 25



















