- Kannada News Photo gallery Cricket photos Axar Patel Named Delhi Capitals IPL 2025 Captain: Replacing Rishabh Pant
IPL 2025: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ನಾಯಕನ ನೇಮಕ
Delhi Capitals' IPL 2025 Captain Announced: 2025ರ ಐಪಿಎಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗ, ದೆಹಲಿ ಕ್ಯಾಪಿಟಲ್ಸ್ ತಂಡ ಅಕ್ಷರ್ ಪಟೇಲ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದೆ. ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರಿದ ನಂತರ, ಅಕ್ಷರ್ ಪಟೇಲ್ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಅಕ್ಷರ್ ಪಟೇಲ್ ಅವರು ತಮ್ಮ ಅದ್ಭುತ ಆಲ್-ರೌಂಡ್ ಪ್ರದರ್ಶನದಿಂದಾಗಿ ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
Updated on: Mar 14, 2025 | 2:27 PM

2025 ರ ಐಪಿಎಲ್ ಇದೇ ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಅಂದರೆ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದಕ್ಕೂ ಮುನ್ನ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಹೊಸ ನಾಯಕನ ಹೆಸರನ್ನು ಘೋಷಿಸಿದೆ. 18ನೇ ಸೀಸನ್‌ನಲ್ಲಿ ಡೆಲ್ಲಿ ತಂಡದ ನಾಯಕತ್ವವನ್ನು ಅಕ್ಷರ್ ಪಟೇಲ್‌ಗೆ ಹಸ್ತಾಂತರಿಸಿದೆ.

ಈ ಆವೃತ್ತಿಗೂ ಮೊದಲು ರಿಷಭ್ ಪಂತ್ ದೆಹಲಿ ತಂಡದ ನಾಯಕತ್ವ ವಹಿಸಿದ್ದರು. ಆದರೆ ಈ ಸೀಸನ್‌ನಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್‌ನ ಭಾಗವಾಗಿದ್ದಾರೆ. ಹೀಗಾಗಿ ತನ್ನ ತಂಡಕ್ಕೆ ನೂತನ ನಾಯಕನ ಹುಡುಕಾಟದಲ್ಲಿದ್ದ ಡೆಲ್ಲಿ ಫ್ರಾಂಚೈಸಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಲ್ ರೌಂಡರ್ ಅಕ್ಷರ್ ಪಟೇಲ್‌ಗೆ ತಂಡವನ್ನು ಮುನ್ನಡೆಸುವ ಅಧಿಕಾರ ಸಿಕ್ಕಿದೆ.

ಅಕ್ಷರ್ ಪಟೇಲ್ ಇದುವರೆಗೆ 150 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಸುಮಾರು 131 ಸ್ಟ್ರೈಕ್ ರೇಟ್‌ನಲ್ಲಿ 1653 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲೂ ಕಮಾಲ್ ಮಾಡಿರುವ ಅಕ್ಷರ್, 7.28 ರ ಎಕಾನಮಿಯಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಐಪಿಎಲ್‌ನಲ್ಲಿ ವರ್ಷಗಳಿಂದ ಆಡುತ್ತ ಬರುತ್ತಿರುವ ಅಕ್ಷರ್ಗೆ ಹೆಚ್ಚಿನ ನಾಯಕತ್ವದ ಅನುಭವವಿಲ್ಲ.

ಆದಾಗ್ಯೂ ಕಳೆದ 7 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅಕ್ಷರ್, ತಮ್ಮ ಆಲ್‌ರೌಂಡ್ ಆಟದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ನ ಬೆನ್ನೆಲುಬಾಗಿದ್ದಾರೆ. ಹೀಗಾಗಿ ಅನುಭವವಿಲ್ಲದಿದ್ದರೂ ಅಕ್ಷರ್ಗೆ ಡೆಲ್ಲಿ ತಂಡದ ನಾಯಕನನ್ನಾಗಿ ನೇಮಿಸಿದೆ. ಈ ಮೊದಲು ನಾಯಕತ್ವದ ವಿಚಾರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಕೆಎಲ್ ರಾಹುಲ್ ಅವರ ಹೆಸರು ಮುಂಚೂಣಿಯಲ್ಲಿತ್ತಾದರೂ, ಅಕ್ಷರ್ಗೆ ಆ ಪಟ್ಟ ಒಲಿದಿದೆ.

ರಾಹುಲ್ ಟೀಂ ಇಂಡಿಯಾವನ್ನು ಹೊರತುಪಡಿಸಿ, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ನಾಯಕತ್ವ ವಹಿಸಿದ ಅನುಭವ ಹೊಂದಿದ್ದಾರೆ. ಅದಕ್ಕಾಗಿಯೇ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕತ್ವವನ್ನು ಅವರಿಗೆ ಹಸ್ತಾಂತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಅವರು ತಂಡವನ್ನು ಮುನ್ನಡೆಸಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಜೇಕ್ ಫ್ರೇಸರ್ ಮೆಕ್‌ಗುರ್ಕ್, ಟಿ ನಟರಾಜನ್, ಕರುಣ್ ನಾಯರ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಮುಖೇಶ್ ಕುಮಾರ್, ದರ್ಶನ್ ನಲ್ಕಂಡೆ, ವಿಪರಾಜ್ ನಿಗಮ್, ದುಷ್ಮಂತ ಚಮೀರ, ಮಾಧವ್ ತಿವಾರಿ, ತ್ರಿಪೂರ್ಣ ವಿಜಯ್, ಮನ್ವಂತ್ ಕುಮಾರ್, ಅಜಯ್ ಮಂಡಲ್, ಡೊನೊವನ್ ಫೆರೇರಾ.



















