
ದುಬೈನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್‌ನ (U19 Asia Cup) ಐದನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಇಂದು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದ ಫಲಿತಾಂಶವೇ ಹೊರಬಿದ್ದಿದ್ದು, ಯುವ ಟೀಂ ಇಂಡಿಯಾ, ಪಾಕಿಸ್ತಾನ ತಂಡವನ್ನು ಬರೋಬ್ಬರಿ 90 ರನ್‌ಗಳಿಂದ ಸೋಲಿಸಿ ಈ ಟೂರ್ನಿಯಲ್ಲಿ ತನ್ನ ಸತತ ಎರಡನೇ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುವ ಭಾರತ ತಂಡ 240 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಭಾರತದ ಬೌಲಿಂಗ್ ದಾಳಿಗೆ ನಲುಗಿ ಕೇವಲ 150 ರನ್‌ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಲ್ಕನೇ ಓವರ್‌ನಲ್ಲಿ ತನ್ನ ಅತಿದೊಡ್ಡ ವಿಕೆಟ್ ಕಳೆದುಕೊಂಡಿತು. ಆರಂಭಿಕ ವೈಭವ್ ಸೂರ್ಯವಂಶಿ ಕೇವಲ 1 ಬೌಂಡರಿ ಬಾರಿಸಿ ಔಟಾದರು. ಇದಾದ ನಂತರ, ಆರನ್ ಜಾರ್ಜ್, ನಾಯಕ ಆಯುಷ್ ಮ್ಹಾತ್ರೆ ಜೊತೆಗೂಡಿ, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿದರು. ಆದಾಗ್ಯೂ ನಾಯಕ ಆಯುಷ್ ಮ್ಹಾತ್ರೆ ಮೂರು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿ 38 ರನ್‌ಗಳಿಗೆ ಔಟಾದರು. ನಂತರ ಬಂದ ವಿಹಾನ್ ಮಲ್ಹೋತ್ರಾ ಕೂಡ 12 ರನ್‌ಗಳಿಗೆ ಮತ್ತು ವೇದಾಂತ್ ತಿವಾರಿ ಕೇವಲ 7 ರನ್‌ಗಳಿಗೆ ಔಟಾದರು. ಆದಾಗ್ಯೂ ಒಂದು ತುದಿಯಲ್ಲಿ ತಂಡದ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದ ಆರನ್ ಜಾರ್ಜ್ ಅದ್ಭುತ ಅರ್ಧಶತಕ ಬಾರಿಸಿದರು.
ಜಾರ್ಜ್ಗೆ ಉತ್ತಮ ಸಾಥ್ ನೀಡಿದ ಆಲ್‌ರೌಂಡರ್ ಕನಿಷ್ಕ್ ಚೌಹಾಣ್ ಕೂಡ 46 ಎಸೆತಗಳಲ್ಲಿ 46 ರನ್ ಗಳಿಸಿ ಉತ್ತಮ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ಅವರು ಅರ್ಧಶತಕ ಗಳಿಸುವಲ್ಲಿ ವಿಫಲರಾದರೆ, ಇತ್ತ ಆರನ್ ಜಾರ್ಜ್ ಶತಕ ಗಳಿಸುವಲ್ಲಿ ವಿಫಲರಾದರು. ಪಾಕಿಸ್ತಾನದ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಯ್ಯಮ್ ಮತ್ತು ಅಬ್ದುಲ್ ಸುಭಾನ್ ತಲಾ ಮೂರು ವಿಕೆಟ್ ಪಡೆದು ಭಾರತವನ್ನು 240 ರನ್‌ಗಳಿಗೆ ಸೀಮಿತಗೊಳಿಸಿದರು.
240 ರನ್ಗಳ ಸಾಧಾರಣ ಗುರಿ ನೀಡಿದ್ದ ಭಾರತಕ್ಕೆ ಪಾಕಿಸ್ತಾನ ತಂಡವನ್ನು ಇದರೊಳಗೆ ಕಟ್ಟಿಹಾಕುವ ಒತ್ತಡವಿತ್ತು. ಅದರಂತೆ ನಾಯಕನ ನಂಬಿಕೆ ಉಳಿಸಿಕೊಂಡ ಭಾರತದ ಬೌಲರ್ಗಳು ಪಾಕಿಸ್ತಾನವನ್ನು ಅಕ್ಷರಶಃ ಕಾಡಿದರು. ದೀಪೇಶ್ ದೇವೇಂದ್ರನ್ ತಂಡಕ್ಕೆ ಮೊದಲ ಬ್ರೇಕ್‌ಥ್ರೂ ನೀಡಿದರು, ಹಿಂದಿನ ಪಂದ್ಯದಲ್ಲಿ ಸ್ಫೋಟಕ ಶತಕ ಗಳಿಸಿದ್ದ ಸಮೀರ್ ಮನ್ಹಾಸ್ ಅವರನ್ನು 9 ರನ್‌ಗಳಿಗೆ ಔಟ್ ಮಾಡಿದರು. ಆ ಬಳಿಕ ದೀಪೇಶ್, ಅಲಿ ಹಸನ್ ಬಲೋಚ್ ಮತ್ತು ಅಹ್ಮದ್ ಹುಸೇನ್ ಅವರನ್ನು ಸಹ ಪೆವಿಲಿಯನ್ಗಟ್ಟಿದರು. ನಂತರ, ಕನಿಷ್ಕ್ ಚೌಹಾಣ್ ಉಸ್ಮಾನ್ ಖಾನ್ ಅವರನ್ನು ಔಟ್ ಮಾಡಿ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
U19 Asia Cup: U-19 ಏಷ್ಯಾಕಪ್ಗೆ ಭಾರತ ತಂಡ ಪ್ರಕಟ; ಮತ್ತೆ ಅಬ್ಬರಿಸಲು ಸಜ್ಜಾದ ವೈಭವ್
ಆದಾಗ್ಯೂ ನಾಯಕ ಫರ್ಹಾನ್ ಯೂಸುಫ್ ಮತ್ತು ಹುಜೈಫಾ ಎಹ್ಸಾನ್ ಮಧ್ಯಮ ಓವರ್‌ಗಳಲ್ಲಿ ಉತ್ತಮ ಜೊತೆಯಾಟವಾಡಿದರು. ಆದರೆ ಈ ಪಾಲುದಾರಿಕೆಯನ್ನು ಮುರಿದ ವೈಭವ್ ಸೂರ್ಯವಂಶಿ, ಪಾಕ್ ನಾಯಕ ಫರ್ಹಾನ್ ಯೂಸುಫ್ ಅವರನ್ನು ಔಟ್ ಮಾಡಿದರು. ನಂತರ ಕನಿಷ್ಕ್ ಚೌಹಾಣ್, ಹುಜೈಫಾ ಎಹ್ಸಾನ್ ಅವರನ್ನು 70 ರನ್‌ಗಳಿಗೆ ಔಟ್ ಮಾಡಿ ಪಾಕಿಸ್ತಾನದ ಭರವಸೆಯನ್ನು ಕೊನೆಗೊಳಿಸಿದರು. ಅಂತಿಮವಾಗಿ ಪಾಕಿಸ್ತಾನ 41.2 ಓವರ್‌ಗಳಲ್ಲಿ 150 ರನ್‌ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Sun, 14 December 25