ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್‌ನ (U19 World Cup 2024) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಯುವ ಪಡೆ ಫೈನಲ್‌ಗೆ ತನ್ನ ಟಿಕೆಟ್ ಕಾಯ್ದಿರಿಸಿದೆ. ಈಗ ಟೀಂ ಇಂಡಿಯಾ (Team India) ಫೆಬ್ರವರಿ 11 ರಂದು ಅಂಡರ್ 19 ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಆಡಬೇಕಾಗಿದ್ದು, ಭಾರತ ಯಾವ ತಂಡವನ್ನು ಎದುರಿಸಿದೆ ಎಂಬುದು ನಾಳೆ ನಿರ್ಧಾರವಾಗಲಿದೆ. ವಾಸ್ತವವಾಗಿ ಅಂಡರ್ 19 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan and Australia) ತಂಡಗಳು ಇದೇ ಫೆಬ್ರವರಿ 8 ರಂದು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೆಬ್ರವರಿ 11 ರಂದು ಭಾರತದ ವಿರುದ್ಧ ಫೈನಲ್ ಪಂದ್ಯವನ್ನು ಆಡಲಿದೆ. ಆದರೆ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವೇ ಭಾರತಕ್ಕೆ ಎದುರಾಳಿಯಾಗಿರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಕ್ರಿಕೆಟ್ ಲೋಕದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅದು ಯಾವ ಹೈ ವೋಲ್ಟೇಜ್ ಪಂದ್ಯಕ್ಕೂ ಕಡಿಮೆ ಇಲ್ಲ. ಈ ಉಭಯ ತಂಡಗಳ ನಡುವಿನ ಪಂದ್ಯಗಳನ್ನು ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳು ಮಾತ್ರ ವೀಕ್ಷಿಸುವುದಿಲ್ಲ. ಬದಲಿಗೆ ವಿಶ್ವದಾದ್ಯಂತದ ಅಭಿಮಾನಿಗಳು ಈ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿರುತ್ತಾರೆ. ಹೀಗಾಗಿ ಕೋಟ್ಯಂತರ ಅಭಿಮಾನಿಗಳು ಪಾಕಿಸ್ತಾನ ಫೈನಲ್ ತಲುಪಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾದರೆ, ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಸಿಹಿ ಸುದ್ದಿ ಇನ್ನೊಂದಿಲ್ಲ.
ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇದುವರೆಗೆ ಒಟ್ಟು 6 ಪಂದ್ಯಗಳನ್ನು ಆಡಿದೆ. ಆಡಿದ ಎಲ್ಲಾ 6 ಪಂದ್ಯಗಳನ್ನು ಭಾರತ ಗೆದ್ದಿದೆ. ವಿಶೇಷವೆಂದರೆ ಟೀಂ ಇಂಡಿಯಾ 3 ಲೀಗ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರಿ ಅಂತರದ ಗೆಲುವು ಸಾಧಿಸಿತ್ತು. ಆ ಬಳಿಕ ನಡೆದ ಸೂಪರ್ ಸಿಕ್ಸ್ ಸುತ್ತಿನಲ್ಲೂ ಭಾರತಕ್ಕೆ ಭರ್ಜರಿ ಜಯ ದೊರಕಿತ್ತು. ಇದಾದ ಬಳಿಕ ನಡೆದ ಸೆಮಿಫೈನಲ್ ಪಂದ್ಯವನ್ನೂ ಭಾರತ ಗೆದ್ದುಕೊಂಡಿದೆ. ಮತ್ತೊಂದೆಡೆ, ಈ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ದಾಖಲೆಯೂ ಉತ್ತಮವಾಗಿದೆ. ಪಾಕಿಸ್ತಾನ ಕೂಡ ಈ ವಿಶ್ವಕಪ್‌ನಲ್ಲಿ ಆಡಿದ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದು ನೇರವಾಗಿ ಸೆಮಿಫೈನಲ್ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನವನ್ನು ಸೋಲಿಸುವುದು ಆಸ್ಟ್ರೇಲಿಯಾಕ್ಕೆ ಅಷ್ಟು ಸುಲಭವಲ್ಲ.
ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಒಟ್ಟು 4 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಉಳಿದ 3 ಪಂದ್ಯಗಳನ್ನು ಕಾಂಗರೂ ತಂಡ ಗೆದ್ದಿದೆ. ಈ ದೃಷ್ಟಿಕೋನದಿಂದ ನೋಡಿದರೆ, ಉಭಯ ತಂಡಗಳ ಬಲಿಷ್ಠವಾಗಿ ಕಾಣುತ್ತಿವೆ. ಪಾಕ್ ತಂಡದ ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿರುವುದರಿಂದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು, ಪಾಕಿಸ್ತಾನ ತಂಡ ಸೋಲಿಸಲಿದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Wed, 7 February 24