U19 World Cup 2026: ಕಿವೀಸ್ ವಿರುದ್ಧ 81 ಎಸೆತಗಳಲ್ಲಿ ಪಂದ್ಯ ಗೆದ್ದ ಯುವ ಭಾರತ
U19 World Cup 2026: ಭಾರತದ ಯುವ ತಂಡವು ಐಸಿಸಿ ಅಂಡರ್-19 ವಿಶ್ವಕಪ್ 2026ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸುಲಭ ಗೆಲುವು ಸಾಧಿಸಿ ಅಜೇಯ ಓಟ ಮುಂದುವರಿಸಿದೆ. ಆರ್‌ಎಸ್ ಅಂಬ್ರಿಸ್ ಅವರ ನಾಲ್ಕು ವಿಕೆಟ್‌ಗಳ ಸಾಧನೆಗೆ ನ್ಯೂಜಿಲೆಂಡ್ 135 ರನ್‌ಗಳಿಗೆ ಆಲೌಟ್ ಆಯಿತು. ನಂತರ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ 13.3 ಓವರ್‌ಗಳಲ್ಲಿ ಗುರಿ ತಲುಪಿತು.

ಭಾರತದ ಯುವ ತಂಡವು ಐಸಿಸಿ ಅಂಡರ್-19 ವಿಶ್ವಕಪ್ 2026 (U19 World Cup 2026) ರಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ನ್ಯೂಜಿಲೆಂಡ್ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ (India vs New Zealand) ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ಮುಂದೆ ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ಇಡೀ ತಂಡವು 135 ಸ್ಕೋರ್‌ಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಬಿರುಗಾಳಿಯ ಇನ್ನಿಂಗ್ಸ್ ಆಡಿ ತಂಡವನ್ನು ಸುಲಭ ಗೆಲುವಿನತ್ತ ಕೊಂಡೊಯ್ದಿತು.
ಬೌಲಿಂಗ್‌ನಲ್ಲಿ ಮಿಂಚಿದ ಅಂಬ್ರಿಸ್
ಬುಲವಾಯೊದಲ್ಲಿ ನಡೆದ ಈ ಪಂದ್ಯವನ್ನು ಮಳೆಯಿಂದಾಗಿ ತಲಾ 37 ಓವರ್‌ಗಳಿಗೆ ಇಳಿಸಲಾಯಿತು. ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಆದರೆ ಮಳೆ ಆಟಕ್ಕೆ ಆರಂಭದಲ್ಲಿಯೇ ಅಡ್ಡಿಪಡಿಸಿದರಿಂದ ಪಂದ್ಯವನ್ನು ತಲಾ ಮೂರು ಓವರ್‌ಗಳಷ್ಟು ಕಡಿಮೆ ಮಾಡಿತು. ಪಂದ್ಯ ಪುನರಾರಂಭವಾದರೂ ಮಳೆ ಮತ್ತೆ ಆಟವನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಉಭಯ ತಂಡಗಳಿಗೆ ತಲಾ 10 ಓವರ್‌ಗಳನ್ನು ಕಡಿತಗೊಳಿಸಲಾಯಿತು. ನಂತರ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲೆಂಡ್ ತಂಡವನ್ನು 36.2 ಓವರ್‌ಗಳಲ್ಲಿ 135 ರನ್‌ಗಳಿಗೆ ಆಲೌಟ್ ಮಾಡಿದರು. ನ್ಯೂಜಿಲೆಂಡ್ ಪರ ಕ್ಯಾಲಮ್ ಸ್ಯಾಮ್ಸನ್ ಅಜೇಯ 37 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಸೆಲ್ವಿನ್ ಸಂಜಯ 28 ರನ್ ಗಳಿಸಿದರು. ಬೇರೆ ಯಾವುದೇ ಬ್ಯಾಟ್ಸ್‌ಮನ್ 25 ರನ್‌ಗಳ ಗಡಿಯನ್ನು ತಲುಪಲಿಲ್ಲ.
ಭಾರತದ ಪರ ಆರ್.ಎಸ್. ಅಂಬ್ರಿಸ್ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ ಪಡೆದರೆ, ಹೆನಿಲ್ ಪಟೇಲ್ ಮೂರು ವಿಕೆಟ್ ಪಡೆದರು. ಇತರ ಬೌಲರ್‌ಗಳು ಸಹ ಮಿತವಾಗಿ ಬೌಲಿಂಗ್ ಮಾಡಿ ನ್ಯೂಜಿಲೆಂಡ್ ದೊಡ್ಡ ಮೊತ್ತ ಗಳಿಸದಂತೆ ತಡೆದರು. ಖಿಲನ್ ಪಟೇಲ್, ಮೊಹಮ್ಮದ್ ಇನಾನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಒಂದು ವಿಕೆಟ್ ಪಡೆದರು.
ವೈಭವ್, ಆಯುಷ್ ಸ್ಫೋಟಕ ಬ್ಯಾಟಿಂಗ್
ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆಕ್ರಮಣಕಾರಿ ಆರಂಭ ಪಡೆಯಿತು. ಆರನ್ ಜಾರ್ಜ್ 6 ಎಸೆತಗಳಲ್ಲಿ 7 ರನ್‌ಗಳಿಗೆ ಔಟಾದರೂ, ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವಿಕೆಟ್‌ಗೆ ಕೇವಲ 39 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟ ನಡೆಸಿ, ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪರವಾಗಿ ತಿರುಗಿಸಿದರು.
T20 World Cup 2026: ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್ನಿಂದ ಹೊರಹಾಕಿದ ಐಸಿಸಿ
ವೈಭವ್ ಸೂರ್ಯವಂಶಿ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಂತೆ 40 ರನ್ ಗಳಿಸಿದರೆ, ಈ ಮಧ್ಯೆ, ನಾಯಕನ ಇನ್ನಿಂಗ್ಸ್ ಆಡಿದ ಆಯುಷ್ ಮ್ಹಾತ್ರೆ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಒಳಗೊಂಡಂತೆ 53 ರನ್ ಬಾರಿಸಿದರು. ನಂತರ ವಿಹಾನ್ ಮಲ್ಹೋತ್ರಾ ಅಜೇಯ 17 ರನ್ ಮತ್ತು ವೇದಾಂತ್ ತ್ರಿವೇದಿ ಅಜೇಯ 13 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಟೀಂಇಂಡಿಯಾ 13.3 ಓವರ್‌ಗಳಲ್ಲಿ (81 ಎಸೆತಗಳು) 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:30 pm, Sat, 24 January 26
