
ಟಿ20 ಕ್ರಿಕೆಟ್ನಲ್ಲಿ ಯುಎಇ (UAE) ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಬಾಂಗ್ಲಾದೇಶ್ (Bangladesh) ತಂಡವನ್ನು ಸೋಲಿಸುವ ಮೂಲಕ ಎಂಬುದು ವಿಶೇಷ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡದ ನಾಯಕ ಮೊಹಮ್ಮದ್ ವಸೀಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕರಾದ ತಂಝಿದ್ ಹಸನ್ (59) ಹಾಗೂ ಲಿಟ್ಟನ್ ದಾಸ್ (40) ಉತ್ತಮ ಆರಂಭ ಒದಗಿಸಿದರು.
ಆ ಬಳಿಕ ಬಂದ ನಜ್ಮುಲ್ ಹೊಸೈನ್ ಶಾಂತೊ 27 ರನ್ಗಳ ಕೊಡುಗೆ ನೀಡಿದರೆ, ತೌಹಿದ್ ಹೃದೋಯ್ 45 ರನ್ ಬಾರಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು.
206 ರನ್ಗಳ ಕಠಿಣ ಗುರಿ ಪಡೆದ ಯುಎಇ ತಂಡಕ್ಕೆ ನಾಯಕ ಮೊಹಮ್ಮದ್ ವಸೀಮ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊಹಮ್ಮದ್ ಝೊಹೈಬ್ ಜೊತೆ ಇನಿಂಗ್ಸ್ ಆರಂಭಿಸಿದ ವಸೀಮ್ ಮೊದಲ ಓವರ್ನಿಂದಲೇ ಸಿಡಿಲಬ್ಬರ ಶುರು ಮಾಡಿದ್ದರು. ಪರಿಣಾಮ 10 ಓವರ್ಗಳಲ್ಲಿ ತಂಡದ ಮೊತ್ತ 100ರ ಗಡಿದಾಟಿತು.
ಅಲ್ಲದೆ 42 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 82 ರನ್ ಬಾರಿಸಿ ಮೊಹಮ್ಮದ್ ವಸೀಮ್ ಔಟಾದರು. ಇನ್ನು ಮೊಹಮ್ಮದ್ ಝೊಹೈಬ್ 38 ರನ್ಗಳ ಕೊಡುಗೆ ನೀಡಿದರು.
ಆ ಬಳಿಕ ಬಂದ ಆಸೀಫ್ ಖಾನ್ 19 ರನ್ ಬಾರಿಸಿದರೆ, ಹೈದರ್ ಅಲಿ 15 ರನ್ಗಳಿಸಿದರು. ಇದಾಗ್ಯೂ ಕೊನೆಯ ಓವರ್ನಲ್ಲಿ ಯುಎಇ ತಂಡಕ್ಕೆ ಗೆಲ್ಲಲು 12 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ದಾಳಿಗಿಳಿದ ತಂಝಿಮ್ ಹಸನ್ ಸಾಕಿಬ್ ಮೊದಲ ಎಸೆತದಲ್ಲೇ ವೈಡ್ ಎಸೆದರು. ಮರು ಎಸೆತದಲ್ಲಿ ಒಂದು ರನ್. ಎರಡನೇ ಎಸೆತದಲ್ಲಿ ಧ್ರುವ್ ಪರಾಶರ್ ಭರ್ಜರಿ ಸಿಕ್ಸ್ ಸಿಡಿಸಿದರು. ಮೂರನೇ ಎಸೆತದಲ್ಲಿ ಧ್ರುವ್ (11) ಬೌಲ್ಡ್ ಆದರು. ನಾಲ್ಕನೇ ಎಸತದಲ್ಲಿ ಒಂದು ರನ್.
ಐದನೇ ಎಸೆತವನ್ನು ನೋಬಾಲ್ ಮಾಡಿದರು. ಮರು ಎಸೆತದಲ್ಲಿ 2 ರನ್ ಕಲೆಹಾಕುವ ಮೂಲಕ ಯುಎಇ ತಂಡವು ಗೆಲುವಿನ ಗುರಿ ಮುಟ್ಟಿತು. ಈ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
UAE vs Bangladesh, 2nd T20I – Sharjah:
Relive the last over drama that unfolded at the iconic Sharjah Cricket Stadium as UAE stunned Bangladesh pic.twitter.com/IrkFvSN1Xz— UAE Cricket Official (@EmiratesCricket) May 19, 2025
ಬಾಂಗ್ಲಾದೇಶ್ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಇದು ಯುಎಇ ತಂಡದ ಮೊದಲ ಜಯ. ಅದರಲ್ಲೂ ಟೆಸ್ಟ್ ಆಡುವ ದೇಶದ ವಿರುದ್ಧ ಯುಎಇ ತಂಡವು ಇದೇ ಮೊದಲ ಬಾರಿಗೆ ಗೆಲುವು ದಾಖಲಿಸಿದೆ.
ಇದನ್ನೂ ಓದಿ: 18 ವರ್ಷಗಳಲ್ಲಿ 18 ನಾಯಕರನ್ನು ಕಣಕ್ಕಿಳಿಸಿದ ಪಂಜಾಬ್ ಕಿಂಗ್ಸ್
ಹಾಗೆಯೇ ಐಸಿಸಿ ಶ್ರೇಯಾಂಕದ ಟಾಪ್-10 ನಲ್ಲಿರುವ ತಂಡವೊಂದರ ವಿರುದ್ಧ ಯುಎಇ ಇದೇ ಮೊದಲ ಬಾರಿಗೆ 200+ ಸ್ಕೋರ್ ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ.