ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಯುಎಇ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡ ಕಿವೀಸ್ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ನಿಧಾನಗತಿಯ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಚಾಡ್ ವೋವ್ಸ್ 21 ರನ್ಗಳಿಸಿದರೆ, ಟಿಮ್ ಸೀಫರ್ಟ್ 7 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಿಚೆಲ್ ಸ್ಯಾಂಟ್ನರ್ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕ್ಲೀವರ್ ಶೂನ್ಯಕ್ಕೆ ಔಟಾದರು. ಮೆಕಾಂಚಿಯ ಇನಿಂಗ್ಸ್ ಕೇವಲ 9 ರನ್ಗಳಿಗೆ ಸೀಮಿತವಾಯಿತು.
ಕೇವಲ 65 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನ್ಯೂಝಿಲೆಂಡ್ ತಂಡಕ್ಕೆ ಈ ಹಂತದಲ್ಲಿ ಮಾರ್ಕ್ ಚಾಪ್ಮನ್ ಆಸರೆಯಾದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಚಾಪ್ಮನ್ 46 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 63 ರನ್ ಸಿಡಿಸಿದರು.
ಮಾರ್ಕ್ ಚಾಪ್ಮನ್ ಅವರ ಈ ಅರ್ಧಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತು.
143 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಯುಎಇ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಆರ್ಯನ್ಶ್ ಶರ್ಮಾ (0) ಮೊದಲ ಓವರ್ನಲ್ಲೇ ಟಿಮ್ ಸೌಥಿ ಎಸೆತದಲ್ಲಿ ಔಟಾದರು. ಆದರೆ ಮತ್ತೊಂದೆಡೆ ನಾಯಕ ಮುಹಮ್ಮದ್ ವಸೀಂ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು.
ಸ್ಪೋಟಕ ಇನಿಂಗ್ಸ್ ಆಡಿದ ವಸೀಂ 29 ಎಸೆತಗಳಲ್ಲಿ 4 ಫೋರ್ ಹಾಗೂ 3 ಭರ್ಜರಿ ಸಿಕ್ಸ್ಗಳೊಂದಿಗೆ 55 ರನ್ ಚಚ್ಚಿದರು. ಆ ಬಳಿಕ ಬಂದ ಅರವಿಂದ್ 25 ರನ್ಗಳ ಕೊಡುಗೆ ನೀಡಿದರು.
ಇನ್ನು 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಸಿಫ್ ಖಾನ್ 29 ಎಸೆತಗಳಲ್ಲಿ ಅಜೇಯ 48 ಹಾಗೂ ಬಾಸಿಲ್ ಹಮೀದ್ ಅಜೇಯ 12 ರನ್ಗಳಿಸುವ ಮೂಲಕ 15.4 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಯುಎಇ ತಂಡವು 8 ವಿಕೆಟ್ಗಳ ಅಮೋಘ ಗೆಲುವು ತನ್ನದಾಗಿಸಿಕೊಂಡಿತು.
This emphatic six sums up the story!
UAE pull off a historic heist, beat NZ by 7 wickets 😱#UAEvNZ #LiveOnFanCode pic.twitter.com/jGU6uafMx2
— FanCode (@FanCode) August 19, 2023
ಇದು ಯುಎಇ ತಂಡದ ಪಾಲಿಗೆ ಐತಿಹಾಸಿಕ ಗೆಲುವು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಇದೇ ಮೊದಲ ಬಾರಿಗೆ ಜಯ ಸಾಧಿಸಿದೆ. ಅದು ಕೂಡ 8 ವಿಕೆಟ್ಗಳ ಅಮೋಘ ಗೆಲುವು. ಈ ಮೂಲಕ ಯುಎಇ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಅಧ್ಯಾಯ ಪುಟವನ್ನು ತೆರೆದಿದೆ.
ಯುಎಇ ಪ್ಲೇಯಿಂಗ್ 11: ಮುಹಮ್ಮದ್ ವಸೀಂ (ನಾಯಕ) , ಆರ್ಯನ್ಶ್ ಶರ್ಮಾ (ವಿಕೆಟ್ ಕೀಪರ್) , ವೃತ್ಯ ಅರವಿಂದ್ , ಆಸಿಫ್ ಖಾನ್ , ಅನ್ಶ್ ಟಂಡನ್ , ಬಾಸಿಲ್ ಹಮೀದ್ , ಅಲಿ ನಾಸೀರ್ , ಅಯಾನ್ ಅಫ್ಜಲ್ ಖಾನ್ , ಮೊಹಮ್ಮದ್ ಫರಾಜುದ್ದೀನ್ , ಮುಹಮ್ಮದ್ ಜವಾದುಲ್ಲಾ , ಜಹೂರ್ ಖಾನ್.
ಇದನ್ನೂ ಓದಿ: IPL 2024: LSG ತಂಡದಿಂದ ಗೌತಮ್ ಗಂಭೀರ್ಗೆ ಗೇಟ್ ಪಾಸ್..?
ನ್ಯೂಝಿಲೆಂಡ್ ಪ್ಲೇಯಿಂಗ್ 11: ಚಾಡ್ ಬೋವ್ಸ್ , ಟಿಮ್ ಸೀಫರ್ಟ್ , ಡೇನ್ ಕ್ಲೀವರ್ (ವಿಕೆಟ್ ಕೀಪರ್) , ಮಾರ್ಕ್ ಚಾಪ್ಮನ್ , ಮಿಚೆಲ್ ಸ್ಯಾಂಟ್ನರ್ , ಜೇಮ್ಸ್ ನೀಶಮ್ , ಕೋಲ್ ಮೆಕಾಂಚಿ , ರಚಿನ್ ರವೀಂದ್ರ , ಕೈಲ್ ಜೇಮಿಸನ್ , ಟಿಮ್ ಸೌಥಿ (ನಾಯಕ) , ಬೆನ್ ಲಿಸ್ಟರ್.