ವೈಭವ್- ಆಯುಷ್ ಸ್ಫೋಟಕ ಬ್ಯಾಟಿಂಗ್: ಅಂಡರ್-19 ಏಷ್ಯಾಕಪ್ ಸೆಮಿಫೈನಲ್ಗೇರಿದ ಭಾರತ
ACC U-19 Asia Cup 2024: ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡ ಯುಎಇ ವಿರುದ್ಧ ಅದ್ಭುತ ಗೆಲುವು ಸಾಧಿಸಿದೆ. 138 ರನ್‌ಗಳ ಗುರಿ ಬೆನ್ನಟ್ಟಿದ ಭಾರತದ ಪರ ಆರಂಭಿಕರಾದ ವೈಭವ್ ಸೂರ್ಯವಂಶಿ (76*) ಮತ್ತು ಆಯುಷ್ ಮ್ಹಾತ್ರೆ (67*) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿ ಭಾರತ ಕೇವಲ 16 ಓವರ್‌ಗಳಲ್ಲಿ ಗುರಿ ತಲುಪಿತು. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಪ್ರವೇಶಿಸಿದೆ.
ಅಂಡರ್-19 ಏಷ್ಯಾಕಪ್‌ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಸೋತು ಆಘಾತಕ್ಕೊಳಗಾಗಿದ್ದ ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದು ಸೆಮಿ ಪೈನಲ್ಗೇರುವಲ್ಲಿ ಯಶಸ್ವಿಯಾಗಿದೆ. ತನ್ನ ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸಿದ್ದ ಭಾರತ ಯುವ ಪಡೆ ಈಗ ಯುಎಇ ತಂಡವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತು. ಕೇವಲ 138 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 50 ಓವರ್‌ಗಳ ಪಂದ್ಯವನ್ನು ಕೇವಲ 16 ಓವರ್‌ಗಳಲ್ಲಿ ಗೆದ್ದುಕೊಂಡಿತು. ಭಾರತದ ಪರ ಆರಂಭಿಕ ವೈಭವ್ ಸೂರ್ಯವಂಶಿ 46 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿದರೆ, ಆಯುಷ್ ಮ್ಹಾತ್ರೆ 51 ಎಸೆತಗಳಲ್ಲಿ 67 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಟೀಂ ಇಂಡಿಯಾಗೆ ಎರಡನೇ ಗೆಲುವು
ಅಂಡರ್-19 ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾಗೆ ಇದು ಎರಡನೇ ಗೆಲುವು. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತಿದ್ದ ಭಾರತ, ಇದೀಗ ಜಪಾನ್ ಮತ್ತು ಈಗ ಯುಎಇ ತಂಡವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ. ಯುಎಇ ವಿರುದ್ಧದ ಬೃಹತ್ ಗೆಲುವಿನ ನಂತರ ಅದರ ನೆಟ್ ರನ್ ರೇಟ್ ತುಂಬಾ ಹೆಚ್ಚಾಗಿದೆ ಎಂಬುದು ದೊಡ್ಡ ವಿಷಯ.
ತತ್ತರಿಸಿದ ಯುಎಇ
ಶಾರ್ಜಾ ಮೈದಾನದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಯುಎಇ ತಂಡದ ಬ್ಯಾಟರ್ಗಳಿಗೆ ಭಾರತದ ಬೌಲರ್ಗಳ ಮುಂದೆ ನೆಲಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಆರಂಭಿಕ ಆರ್ಯನ್ ಸಕ್ಸೇನಾ 9 ರನ್ ಗಳಿಸಿ ಔಟಾದರೆ, ಯಾಯಿನ್ ರೈ ಮೊದಲ ಎಸೆತದಲ್ಲಿ ಔಟಾದರು. ಅಕ್ಷತ್ ರೈ 26 ರನ್ ಗಳಿಸಲಷ್ಟೇ ಶಕ್ತರಾದರು. ಹಾರ್ದಿಕ್ ರಾಜ್ ಮಧ್ಯಮ ಓವರ್‌ಗಳಲ್ಲಿ 2 ವಿಕೆಟ್ ಪಡೆಯುವ ಮೂಲಕ ಯುಎಇಯ ಬ್ಯಾಟಿಂಗ್ ಬೆನ್ನೇಲುಬು ಮುರಿದರು. ಟೀಂ ಇಂಡಿಯಾ ಪರ ಯುಧ್‌ಜಿತ್ ಗುಹಾ ಗರಿಷ್ಠ 3 ವಿಕೆಟ್ ಪಡೆದರೆ, ಚೇತನ್ ಶರ್ಮಾ ಮತ್ತು ಹಾರ್ದಿಕ್ ತಲಾ 2 ವಿಕೆಟ್ ಪಡೆದರು. ಆಯುಷ್ ಮ್ಹಾತ್ರೆ ಮತ್ತು ಕಾರ್ತಿಕೇಯ ಕೂಡ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ಯುಎಇ ತಂಡ 44 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಯಿತು.
ವೈಭವ್- ಆಯುಷ್ ಸ್ಫೋಟಕ ಬ್ಯಾಟಿಂಗ್
ಯುಎಇ ಬ್ಯಾಟ್ಸ್‌ಮನ್‌ಗಳು ರನ್‌ಗಾಗಿ ಹಾತೊರೆಯುತ್ತಿದ್ದ ಪಿಚ್‌ನಲ್ಲಿ ಭಾರತದ ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಬಂದ ತಕ್ಷಣವೇ ರನ್‌ಗಳ ಮಳೆ ಸುರಿಸಿದರು. ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸುವ ಮೂಲಕ ವೈಭವ್ ಖಾತೆ ತೆರೆದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಪವರ್‌ಪ್ಲೇನಲ್ಲಿಯೇ ಯುಎಇಯನ್ನು ಪಂದ್ಯದಿಂದ ಹೊರಹಾಕಿದರು. ಆಯುಷ್ 51 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿದರೆ, ಸೂರ್ಯವಂಶಿ 46 ಎಸೆತಗಳಲ್ಲಿ 76 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 6 ಸಿಕ್ಸರ್ ಮತ್ತು 3 ಬೌಂಡರಿಗಳು ಸಿಡಿದವು. ಈ ಇಬ್ಬರು ಆರಂಭಿಕರು ಕೊನೆಯವರೆಗೂ ಅಜೇಯರಾಗಿ ಉಳಿದು ಕೇವಲ 16.1 ಓವರ್ಗಳಲ್ಲೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Wed, 4 December 24