‘ನಮ್ಮ ತಂಡ ಹೋಗಲ್ಲ, ಆದರೆ ಪಾಕ್ ತಂಡ ಭಾರತಕ್ಕೆ ಬರಲೇಬೇಕು’; ಐಸಿಸಿಗೆ ಬಿಸಿಸಿಐ ಸ್ಪಷ್ಟನೆ
ICC Tournaments Hybrid Model: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಪಂದ್ಯಾವಳಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ಷರತ್ತನ್ನು ಐಸಿಸಿ ಮುಂದಿಟ್ಟಿದೆ. ಆದರೆ, ಬಿಸಿಸಿಐ ಈ ಷರತ್ತನ್ನು ತಿರಸ್ಕರಿಸಿದ್ದು, ಭದ್ರತಾ ಕಾರಣಗಳಿಗಾಗಿ ಭಾರತೀಯ ತಂಡ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ. ಆದರೆ ಪಾಕಿಸ್ತಾನ ತಂಡ ಭಾರತಕ್ಕೆ ಬರದಿರಲು ಯಾವುದೇ ಕಾರಣಗಳಿಲ್ಲ ಎಂದು ಬಿಸಿಸಿಐ ಐಸಿಸಿಗೆ ತಿಳಿಸಿದೆ.
ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದ ಶಮನಗೊಳ್ಳುವುದಕ್ಕೂ ಮುನ್ನಬೇ ಬಿಸಿಸಿಐ ಮತ್ತೊಮ್ಮೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆಘಾತ ನೀಡಿದೆ. ಐಸಿಸಿ ಪಂದ್ಯಾವಳಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕು ಎಂಬ ಷರತ್ತು ವಿಧಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಖಡಕ್ ಉತ್ತರ ನೀಡಿದೆ. ನಾವು ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಕಾರಣವಿದೆ. ಆದರೆ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸದಿರಲು ಯಾವುದೇ ಕಾರಣಗಳಿಲ್ಲ. ಹೀಗಾಗಿ ಹೈಬ್ರಿಡ್ ಮಾದರಿಗೆ ನಾವು ಒಪ್ಪುವ ಮಾತೇ ಇಲ್ಲ ಎಂದು ಬಿಸಿಸಿಐ, ಐಸಿಸಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಪಿಸಿಬಿಯ ಷರತ್ತೇನು?
ವಾಸ್ತವವಾಗಿ ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಆದರೆ ಈ ಒಪ್ಪಿಗೆಯ ಜೊತೆಗೆ ಪಿಸಿಬಿ ಐಸಿಸಿ ಮುಂದೆ ಪ್ರಮುಖ ಷರತ್ತುಗಳನ್ನಿಟ್ಟಿತ್ತು. ಆ ಪ್ರಕಾರ, ಮುಂದಿನ 7 ವರ್ಷಗಳಲ್ಲಿ ನಡೆಯಲ್ಲಿರುವ ಐಸಿಸಿ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲೇ ನಡೆಸಬೇಕು ಎಂಬುದು ಪಿಸಿಬಿಯ ಪ್ರಮುಖ ಷರತ್ತಾಗಿತ್ತು. ಪಿಸಿಬಿಯ ಈ ಷರತ್ತಿನ ಬಗ್ಗೆ ಐಸಿಸಿ ಇದುವರೆಗೆ ಯಾವುದೇ ಉತ್ತರ ನೀಡಿಲ್ಲ. ಆದರೆ ಐಸಿಸಿಗೂ ಮುನ್ನ ಈ ಬಗ್ಗೆ ಮೌನ ಮುರಿದಿರುವ ಬಿಸಿಸಿಐ, ಪಿಸಿಬಿಯ ಈ ಷರತ್ತನ್ನು ಒಪ್ಪಿಕೊಳ್ಳಲು ಸಾಧ್ಯವೆ ಇಲ್ಲ ಎಂದಿದೆ ಎಂದು ವರದಿಯಾಗಿದೆ.
ಬಿಸಿಸಿಗೆ ತಿರುಗೇಟು ನೀಡುವ ಹುನ್ನಾರ
ಬಿಸಿಸಿಐ ಈ ರೀತಿಯ ನಿಲುವು ತಾಳಲು ಕಾರಣವೂ ಇದೆ. ಅದೆನೆಂದರೆ ಮುಂದಿನ 7 ವರ್ಷಗಳಲ್ಲಿ ಅಂದರೆ 2031ರ ವರೆಗೆ ಪ್ರತಿ ವರ್ಷ ಪ್ರಮುಖ ಟೂರ್ನಿ ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಇದರ ಅಡಿಯಲ್ಲಿ 2026 ರಲ್ಲಿ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. 2029ರಲ್ಲಿ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇದರ ನಂತರ ಭಾರತ ಮತ್ತು ಬಾಂಗ್ಲಾದೇಶ 2031 ರಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಆತಿಥ್ಯ ನೀಡಲಿವೆ. ಇದರ ಜೊತೆಗೆ ಮುಂದಿನ ವರ್ಷ ಮಹಿಳೆಯರ ಏಕದಿನ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯಲ್ಲಿದೆ. ಹೀಗಾಗಿ ಮುಂದಿನ 7 ವರ್ಷಗಳಲ್ಲಿ ನಡೆಯಲ್ಲಿರುವ ಐಸಿಸಿ ಟೂರ್ನಿಗಳಿಗೆ ಭಾರತದ ಆತಿಥ್ಯವೇ ಬಹುಪಾಲಿದೆ. ಆದ್ದರಿಂದಲೇ ಈ ಹೈಬ್ರಿಡ್ ಮಾದರಿಯನ್ನು ಮುಂದಿನ 7 ವರ್ಷಗಳ ಕಾಲ ಎಲ್ಲಾ ಐಸಿಸಿ ಈವೆಂಟ್ಗಳಲ್ಲಿ ಅಳವಡಿಸಬೇಕು ಎಂಬ ಷರತನ್ನು ಪಾಕಿಸ್ತಾನ ಮುಂದಿಟ್ಟಿತ್ತು.
ಬಿಸಿಸಿಐ ಖಡಕ್ ರಿಪ್ಲೈ
ಇದೀಗ ಪಿಸಿಬಿ ಹೈಬ್ರಿಡ್ ಷರತ್ತಿಗೆ ಶಾಕ್ ನೀಡಿರುವ ಬಿಸಿಸಿಐ, ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಪ್ರಮುಖ ಕಾರಣ ಭದ್ರತೆಯ ಕೊರತೆ. 2008ರ ಮುಂಬೈ ದಾಳಿಯ ನಂತರ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಿಲ್ಲ. ಆದರೆ ಮುಂದಿನ ವರ್ಷ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಮತ್ತು 2026 ರಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಭಾರತಕ್ಕೆ ಬರಬೇಕಾಗುತ್ತದೆ. ಏಕೆಂದರೆ ಪಾಕಿಸ್ತಾನಿ ಆಟಗಾರರು ಭಾರತದ ನೆಲದಲ್ಲಿ ಸುರಕ್ಷಿತವಾಗಿರುತ್ತಾರೆ. 2023 ರ ವಿಶ್ವಕಪ್‌ನಲ್ಲಿ, ಪಾಕಿಸ್ತಾನ ತಂಡವು ಭಾರತದಲ್ಲಿ ಎಲ್ಲಾ ಪಂದ್ಯಗಳನ್ನು ಆಡಿತು. ಇಡೀ ಪಂದ್ಯಾವಳಿಯಲ್ಲಿ ಅವರಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಹೀಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಬರಲೇಬೇಕು ಎಂದು ಬಿಸಿಸಿಐ ಹೇಳಿದೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Wed, 4 December 24