
ವಿಜಯ್ ಹಜಾರೆ ಟೂರ್ನಿಯಲ್ಲಿನ ನಾಲ್ಕನೇ ಪಂದ್ಯದಲ್ಲೂ ಕರ್ನಾಟಕ ಜಯ ಸಾಧಿಸಿದೆ. ತಿರುವನಂತಪುರದ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬರೋಡಾ ವಿರುದ್ದದ ಪಂದ್ಯದಲ್ಲಿ ಕರ್ನಾಟಕ ತಂಡವು 6 ವಿಕೆಟ್ಗಳ ಜಯ ಸಾಧಿಸಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ನಾಯಕ ಮನೀಷ್ ಪಾಂಡೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಉತ್ತಮ ದಾಳಿ ಸಂಘಟಿಸಿದ ಕರ್ನಾಟಕ ತಂಡವು ಆರಂಭದಲ್ಲೇ ಬರೋಡಾ ರನ್ ಗತಿಯನ್ನು ನಿಯಂತ್ರಿಸಿದರು.
ಅದರಲ್ಲೂ ವಿ. ವೈಶಾಖ್ ಅವರ ವೇಗಕ್ಕೆ ಹಾಗೂ ಕೆಸಿ ಕಾರ್ಯಪ್ಪ ಅವರ ಸ್ಪಿನ್ ಮೋಡಿ ಮುಂದೆ ಬರೋಡಾ ಬ್ಯಾಟರ್ಗಳು ಪರದಾಡಿದರು. ಅದರಂತೆ 48.3 ಓವರ್ನಲ್ಲಿ ಬರೋಡಾ ತಂಡವು ಕೇವಲ 176 ರನ್ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಪರ ಕೆಸಿ ಕಾರ್ಯಪ್ಪ 10 ಓವರ್ನಲ್ಲಿ ಕೇವಲ 28 ರನ್ ನೀಡಿ 3 ವಿಕೆಟ್ ಪಡೆದರೆ, ವಿ. ವೈಶಾಖ್ 3 ವಿಕೆಟ್ ಕಬಳಿಸಿ ಮಿಂಚಿದರು. ಹಾಗೆಯೇ ಪ್ರವೀಣ್ ದುಬೆ 2 ವಿಕೆಟ್ ಪಡೆದು ಗಮನ ಸೆಳೆದರು.
ಇನ್ನು 177 ರನ್ಗಳ ಸಾಧಾರಣ ಸವಾಲು ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ರೋಹನ್ ಕದಮ್ ಕೇವಲ 14 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ರವಿಕುಮಾರ್ ಸಮರ್ಥ್ 35 ರನ್ ಬಾರಿಸಿದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.
ಆರಂಭಿಕರಿಬ್ಬರೂ ಔಟಾದ ಬೆನ್ನಲ್ಲೇ ಮನೀಷ್ ಪಾಂಡೆ (19) ಹಾಗೂ ಕರುಣ್ ನಾಯರ್ (0) ರನೌಟ್ ಆಗಿ ಹೊರನಡೆದರು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೃಷ್ಣಮೂರ್ತಿ ಸಿದ್ಧಾರ್ಥ್ ತಂಡಕ್ಕೆ ಆಸರೆಯಾದರು. ಶ್ರೀನಿವಾಸ್ ಶರತ್ ಜೊತೆಗೂಡಿ ತಂಡವನ್ನು ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 150 ರನ್ ಆಗಿದ್ದ ವೇಳೆ ಮಳೆಯಿಂದಾಗಿ ಅಡಚಣೆಯುಂಟಾಯಿತು. ಈ ಹಂತದಲ್ಲಿ ಕರ್ನಾಟಕ ತಂಡಕ್ಕೆ 62 ಎಸೆತಗಳಲ್ಲಿ 27 ರನ್ಗಳ ಅವಶ್ಯಕತೆಯಿತ್ತು. ಆದರೆ ಮಳೆ ನಿಲ್ಲದ ಕಾರಣ ಅಂತಿಮವಾಗಿ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡವು 6 ವಿಕೆಟ್ಗಳ ಜಯ ಸಾಧಿಸಿತು. ಕರ್ನಾಟಕ ಪರ ಸಿದ್ದಾರ್ಥ್ ಅಜೇಯ 46 ರನ್ಗಳಿಸಿದರೆ, ಶರತ್ 21 ರನ್ಗಳಿಸಿ ಅಜೇಯರಾಗಿ ಉಳಿದರು.
ಏನಿದು ವಿಜೆಡಿ ನಿಯಮ?
ಕ್ರಿಕೆಟ್ನಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮದಂತೆ ಇದೀಗ ವಿ. ಜಯದೇವನ್ (ವಿಜೆಡಿ) ಸೂತ್ರಗಳನ್ನು ಬಳಸಲಾಗುತ್ತದೆ. ಅಂದರೆ ಈ ಹಿಂದಿನ ಡೆಕ್ವರ್ಥ್ ಲೂಯಿಸ್ ನಿಯಮಕ್ಕಿಂತ, ವಿಜೆಡಿ ನಿಯಮವು ಫಲಿತಾಂಶ ನಿರ್ಧಾರದಲ್ಲಿ ಉತ್ತಮ ವಿಧಾನವಾಗಿದ್ದು, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್ ಪಂದ್ಯಗಳಿಗೆ ಅಡಚಣೆಯಾದರೆ ಫಲಿತಾಂಶಗಳ ನಿರ್ಧಾರಗಳಲ್ಲಿ ವಿಜೆಡಿ ನಿಯಮವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ
ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
ಇದನ್ನೂ ಓದಿ: Virat Kohli: ಭಾರತ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ…ಆದರೂ