Vijay Hazare Trophy 2022: ವಿಜಯ್ ಹಜಾರೆ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡವು ಜಾರ್ಖಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಜಾರ್ಖಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ ಮೊದಲ ಓವರ್ನಲ್ಲೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ರೋನಿತ್ ಮೋರೆ ಕೂಡ 2ನೇ ಓವರ್ನಲ್ಲಿ ಮತ್ತೊಂದು ವಿಕೆಟ್ ಉರುಳಿಸಿದರು. ಆರಂಭಿಕರಿಬ್ಬರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸುವ ಮೂಲಕ ಉತ್ತಮ ಆರಂಭ ಪಡೆದ ಕರ್ನಾಟಕ ಮೊದಲ 10 ಓವರ್ಗಳಲ್ಲಿ ಮೇಲುಗೈ ಸಾಧಿಸಿದರು.
ಮೊದಲ 10 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕೇವಲ 29 ರನ್ ಕಲೆಹಾಕಿದ್ದ ಜಾರ್ಖಂಡ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಶಾಗ್ರ ಆಸರೆಯಾದರು. ಅನ್ಕುಲ್ ರಾಯ್ ಜೊತೆ ಉತ್ತಮ ಜೊತೆಯಾಟವಾಡಿ ಕುಶರಂಗ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಅತ್ತ 80 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್ನೊಂದಿಗೆ 74 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕುಶಾಗ್ರರನ್ನು ಮುರಳೀಧರ ವೆಂಕಟೇಶ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ 57 ರನ್ ಬಾರಿಸಿದ್ದ ಅಂಕುಲ್ ರಾಯ್ ಕೂಡ ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಮತ್ತೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದರು. ಪರಿಣಾಮ ಜಾರ್ಖಂಡ್ ತಂಡವು 47.1 ಓವರ್ಗಳಲ್ಲಿ 187 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ ವಿದ್ವತ್ ಕಾವೇರಪ್ಪ, ರೋನಿತ್ ಮೋರೆ, ವೆಂಕಟೇಶ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
188 ರನ್ಗಳ ಟಾರ್ಗೆಟ್ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ ಉತ್ತಮ ಆರಂಭ ಒದಗಿಸಿದರು. ಒಂದೆಡೆ ಮಯಾಂಕ್ ಅರ್ಗವಾಲ್ 12 ರನ್ಗಳಿಸಿ ಔಟಾದರೆ, ಮತ್ತೊಂದೆಡೆ ಸಮರ್ಥ್ 60 ಎಸೆತಗಳಲ್ಲಿ 7 ಫೋರ್ನೊಂದಿಗೆ 53 ರನ್ ಬಾರಿಸಿದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಆಡಿದ ನಿಕಿನ್ ಜೋಸ್ 93 ಎಸೆತಗಳಲ್ಲಿ ಅಜೇಯ 63 ರನ್ ಕಲೆಹಾಕಿದರು.
ರವಿಕುಮಾರ್ ಸಮರ್ಥ್ (53) ನಿರ್ಗಮನದ ಬಳಿಕ ಬಂದ ಮನೀಷ್ ಪಾಂಡೆ (18), ಶ್ರೇಯಸ್ ಗೋಪಾಲ್ (12) ಬೇಗನೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು ನಿಕಿನ್ ಜೋಸ್ 40.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ಮುಟ್ಟಿಸಿದರು. ಈ ಗೆಲುವಿನೊಂದಿಗೆ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಸೋಮವಾರ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡವು ಪಂಜಾಬ್ ತಂಡವನ್ನು ಎದುರಿಸಲಿದೆ.
ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಮನೀಶ್ ಪಾಂಡೆ , ಶ್ರೇಯಸ್ ಗೋಪಾಲ್ , ಶರತ್ ಬಿಆರ್ ( ವಿಕೆಟ್ ಕೀಪರ್ ) , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ರೋನಿತ್ ಮೋರೆ , ಮುರಳೀಧರ ವೆಂಕಟೇಶ್ , ವಿಧ್ವತ್ ಕಾವೇರಪ್ಪ
ಜಾರ್ಖಂಡ್ ಪ್ಲೇಯಿಂಗ್ ಇಲೆವೆನ್: ಅರ್ನವ್ ಸಿನ್ಹಾ , ಉತ್ಕರ್ಷ್ ಸಿಂಗ್ , ಶಹಬಾಜ್ ನದೀಮ್ , ವಿರಾಟ್ ಸಿಂಗ್ (ನಾಯಕ) , ಸೌರಭ್ ತಿವಾರಿ , ರಾಜನ್ದೀಪ್ ಸಿಂಗ್ , ಕುಮಾರ್ ಕುಶಾಗ್ರ ( ವಿಕೆಟ್ ಕೀಪರ್) , ಅಂಕುಲ್ ರಾಯ್ , ಬಾಲ ಕೃಷ್ಣ , ರಾಹುಲ್ ಶುಕ್ಲಾ , ಆಶಿಶ್ ಕುಮಾರ್.