Vijay Hazare Trophy 2023: ಸೆಮಿಫೈನಲ್​ಗೆ ಪ್ರವೇಶಿಸಿದ ಕರ್ನಾಟಕ

| Updated By: ಝಾಹಿರ್ ಯೂಸುಫ್

Updated on: Dec 11, 2023 | 4:39 PM

Vijay Hazare Trophy 2023: ಯಶ್ ಕಮ್ 72 ಎಸೆತಗಳಲ್ಲಿ 38 ರನ್ ಬಾರಿಸಿದರೆ, ಶುಭಂ ದುಬೆ 59 ಎಸೆತಗಳಲ್ಲಿ 1 ಸಿಕ್ಸ್​ ಹಾಗೂ 4 ಫೋರ್​ಗಳೊಂದಿಗೆ 41 ರನ್ ಬಾರಿಸಿದರು. ಆದರೆ ಇವರಿಬ್ಬರ ನಿರ್ಗಮನದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್​ಗಳು ವಿದರ್ಭ ತಂಡವನ್ನು 44.5 ಓವರ್​ಗಳಲ್ಲಿ 173 ರನ್​ಗಳಿಗೆ ಆಲೌಟ್ ಮಾಡಿದರು.

Vijay Hazare Trophy 2023: ಸೆಮಿಫೈನಲ್​ಗೆ ಪ್ರವೇಶಿಸಿದ ಕರ್ನಾಟಕ
ಸಾಂದರ್ಭಿಕ ಚಿತ್ರ
Follow us on

ರಾಜ್​ಕೋಟ್​ನ ಸನೋಸಾರ ಕ್ರಿಕೆಟ್ ಮೈದಾನದಲ್ಲಿ ನಡೆದ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕರ್ನಾಟಕ (Karnataka) ತಂಡ ಭರ್ಜರಿ ಜಯ ಸಾಧಿಸಿದೆ. ವಿದರ್ಭ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕ ಬೌಲರ್​ಗಳು ಯಶಸ್ವಿಯಾಗಿದ್ದರು. ಕೇವಲ 39 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವಿದರ್ಭ ತಂಡಕ್ಕೆ ಆಸರೆಯಾಗಿದ್ದು ಶುಭಂ ದುಬೆ ಹಾಗೂ ಯಶ್ ಕದಮ್.

ಯಶ್ ಕಮ್ 72 ಎಸೆತಗಳಲ್ಲಿ 38 ರನ್ ಬಾರಿಸಿದರೆ, ಶುಭಂ ದುಬೆ 59 ಎಸೆತಗಳಲ್ಲಿ 1 ಸಿಕ್ಸ್​ ಹಾಗೂ 4 ಫೋರ್​ಗಳೊಂದಿಗೆ 41 ರನ್ ಬಾರಿಸಿದರು. ಆದರೆ ಇವರಿಬ್ಬರ ನಿರ್ಗಮನದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್​ಗಳು ವಿದರ್ಭ ತಂಡವನ್ನು 44.5 ಓವರ್​ಗಳಲ್ಲಿ 173 ರನ್​ಗಳಿಗೆ ಆಲೌಟ್ ಮಾಡಿದರು.

ಕರ್ನಾಟಕ ಪರ ಅತ್ಯುತ್ತಮ ದಾಳಿ ಸಂಘಟಿಸಿದ ವಿಜಯಕುಮಾರ್ ವೈಶಾಕ್ 4 ವಿಕೆಟ್ ಕಬಳಿಸಿದರೆ, ಜಗದೀಶ್ ಸುಚಿತ್ ಹಾಗೂ ಮನೋಜ್ ಭಾಂಡಗೆ ತಲಾ 2 ವಿಕೆಟ್ ಪಡೆದರು.

ಕರ್ನಾಟಕಕ್ಕೆ 174 ರನ್​ಗಳ ಟಾರ್ಗೆಟ್:

50 ಓವರ್​ಗಳಲ್ಲಿ ಸುಲಭ ಗುರಿ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ರವಿಕುಮಾರ್ ಸಮರ್ಥ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 82 ರನ್​ಗಳ ಜೊತೆಯಾಟವಾಡಿದ ಬಳಿಕ ಮಯಾಂಕ್ ಅಗರ್ವಾಲ್ (51) ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ನಿಕಿನ್ ಜೋಸ್ 45 ಎಸೆತಗಳಲ್ಲಿ 31 ರನ್​ಗಳ ಕೊಡುಗೆ ನೀಡಿದರು. ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತು ಇನಿಂಗ್ಸ್ ಕಟ್ಟಿದ ರವಿಕುಮಾರ್ ಸಮರ್ಥ್ 113 ಎಸೆತಗಳಲ್ಲಿ 7 ಫೋರ್​ಗಳೊಂದಿಗೆ ಅಜೇಯ 72 ರನ್ ಬಾರಿಸಿದರು. ಈ ಮೂಲಕ ಕರ್ನಾಟಕ ತಂಡವು 40.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕರ್ನಾಟಕ ತಂಡವು ಸೆಮಿಫೈನಲ್​ಗೆ ಪ್ರವೇಶಿಸಿದೆ.

ವಿದರ್ಭ ಪ್ಲೇಯಿಂಗ್ ಇಲೆವೆನ್: ಯಶ್ ಕದಮ್ , ಅಥರ್ವ ತೈಡೆ (ನಾಯಕ) , ಅಮನ್ ಮೊಖಡೆ , ಕರುಣ್ ನಾಯರ್ , ಅಕ್ಷಯ್ ವಾಡ್ಕರ್ (ವಿಕೆಟ್ ಕೀಪರ್) , ಹರ್ಷ್ ದುಬೆ , ಅಕ್ಷಯ್ ಕರ್ನೇವರ್ , ಶುಭಂ ದುಬೆ , ಉಮೇಶ್ ಯಾದವ್ , ದರ್ಶನ್ ನಲ್ಕಂಡೆ , ಯಶ್ ಠಾಕೂರ್.

ಇದನ್ನೂ ಓದಿ:  RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?

ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ಮನೀಶ್ ಪಾಂಡೆ , ಅಭಿನವ್ ಮನೋಹರ್ , ಮನೋಜ್ ಭಾಂಡಗೆ , ನಿಕಿನ್ ಜೋಸ್ , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಕೃಷ್ಣಪ್ಪ ಗೌತಮ್ , ಜಗದೀಶ್ ಸುಚಿತ್ , ವಾಸುಕಿ ಕೌಶಿಕ್ , ವಿಜಯಮಾರ್ ವೈಶಾಕ್.