
ಡಿಸೆಂಬರ್ 24, 2025 ರಂದು ಪ್ರಾರಂಭವಾಗಿ ಜನವರಿ 18, 2026 ರವರೆಗೆ ನಡೆಯಲಿರುವ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಗೆ (Vijay Hazare Trophy) ಹಾಲಿ ಚಾಂಪಿಯನ್ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ 16 ಸದಸ್ಯರ ತಂಡವನ್ನು ಕೆಎಸ್ಸಿಎ ಆಯ್ಕೆ ಮಾಡಿದೆ. ಗಮನಿಸಬೇಕಾದ ಸಂಗತಿಯೆಂದರೆ ಕೆಎಲ್ ರಾಹುಲ್ ಕೂಡ ಈ ಟೂರ್ನಿಯಲ್ಲಿ ಆಡಲಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾ ಆಟಗಾರರು ಕೂಡ ದೇಶಿ ಟೂರ್ನಿಯಲ್ಲಿ ಆಡಬೇಕೆಂಬ ಕಡ್ಡಾಯ ನಿಯಮವನ್ನು ಬಿಸಿಸಿಐ ಹೊರಡಿಸಿದೆ. ಇದರ ಪರಿಣಾಮವಾಗಿ ಕೆಎಲ್ ರಾಹುಲ್ (KL Rahul) ಕರ್ನಾಟಕ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದರೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಕರ್ನಾಟಕ ಈ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯವನ್ನು ಡಿಸೆಂಬರ್ 24 ರಂದು ಜಾರ್ಖಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಆಡುವ ಸಾಧ್ಯತೆಗಳಿವೆ. ಅಲ್ಲದೆ ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಕರ್ನಾಟಕ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. 2024/25 ರ ಆವೃತ್ತಿಯ ಫೈನಲ್ನಲ್ಲಿ ವಿದರ್ಭ ತಂಡವನ್ನು 36 ರನ್ಗಳಿಂದ ಸೋಲಿಸಿದ್ದ ಕರ್ನಾಟಕ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಟ್ರೋಫಿ ಎತ್ತಿಹಿಡಿದಿತ್ತು.
ಆದಾಗ್ಯೂ ಕಳೆದ ಆವೃತ್ತಿಯಲ್ಲಿ ವಿದರ್ಭ ತಂಡದ ಪರ ಕಣಕ್ಕಿಳಿದು ರನ್ಗಳ ಸುರಿಮಳೆ ಹರಿಸುವುದರೊಂದಿಗೆ ತಂಡವನ್ನು ಪೈನಲ್ಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕರುಣ್ ನಾಯರ್ ಈ ಬಾರಿ ಕರ್ನಾಟಕ ತಂಡದ ಪರ ಆಡುತ್ತಿದ್ದಾರೆ. ಮಾತ್ರವಲ್ಲದೆ ಅವರಿಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಕರುಣ್ ನಾಯರ್ ಆಗಮನ ಹಾಗೂ ಕೆಎಲ್ ರಾಹುಲ್ ಉಪಸ್ಥಿತಿ ಕರ್ನಾಟಕ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸಿದ್ದು, ಈ ಬಾರಿಯೂ ಕರ್ನಾಟಕ ತಂಡವೇ ಗೆಲುವಿನ ಫೇವರೇಟ್ ಎನಿಸಿಕೊಂಡಿದೆ.
Karun Nair named Mayank Aggarwal’s debut for #VijayHazareTrophy KL Rahul & Prasidh Krishna in the squad.. Harshil Dhamani deservingly makes the squad #Karnataka #Cricket pic.twitter.com/9MRaNlPCbN
— Manuja (@manujaveerappa) December 17, 2025
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್ (ಉಪನಾಯಕ), ಅಭಿಲಾಷ್ ಶೆಟ್ಟಿ, ಶ್ರೀಶ ಆಚಾರ್, ಹರ್ಷಿಲ್ ಧರ್ಮನಿ, ಶ್ರೇಯಸ್ ಗೋಪಾಲ್, ಅಭಿನವ್ ಮನೋಹರ್, ಮನ್ವಂತ ಕುಮಾರ್, ದೇವದತ್ ಪಡಿಕ್ಕಲ್, ಧ್ರುವ ಪ್ರಭಾಕರ್, ಪ್ರಸಿದ್ಧ್ ಕೃಷ್ಣ, ಕೆಎಲ್ ರಾಹುಲ್, ಬಿ ಆರ್ ಶರತ್ , ಕೃಷ್ಣನ್ ಶ್ರೀಜಿತ್, ರವಿಚಂದ್ರನ್ ಸ್ಮರಣ್, ವೈಶಾಕ್ ವಿಜಯಕುಮಾರ್.
ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನು ವಿಜಯ್ ಹಜಾರೆ ಟ್ರೋಫಿಯಲ್ಲಿ ಕನಿಷ್ಠ ಪಕ್ಷ ಎರಡು ಪಂದ್ಯಗಳನ್ನಾದರೂ ಆಡಬೇಕೆಂಬ ನಿಯಮ ಹೊರಡಿಸಿದೆ. ಹಾಗಾಗಿ ನಿಯಮದಡಿಯಲ್ಲಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಹಿರಿಯ ಆಟಗಾರರು ತಮ್ಮ ರಾಜ್ಯ ತಂಡಗಳಿಗಾಗಿ ಆಡಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ