Vijay Hazare Trophy 2025: ಹರಿಯಾಣವನ್ನು ಮಣಿಸಿ 5ನೇ ಬಾರಿಗೆ ಫೈನಲ್​ಗೇರಿದ ಕರ್ನಾಟಕ..!

|

Updated on: Jan 15, 2025 | 9:40 PM

Vijay Hazare Trophy 2025: ವಿಜಯ್ ಹಜಾರೆ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಹರಿಯಾಣವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐದನೇ ಬಾರಿಗೆ ಫೈನಲ್ ತಲುಪಿದೆ. ಹರಿಯಾಣ ನೀಡಿದ 237 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಪರ ದೇವದತ್ ಪಡಿಕ್ಕಲ್ (86) ಮತ್ತು ಸ್ಮರಣ್ ರವಿಚಂದ್ರನ್ (76) ಗೆಲುವಿನ ಅರ್ಧಶತಕ ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

Vijay Hazare Trophy 2025: ಹರಿಯಾಣವನ್ನು ಮಣಿಸಿ 5ನೇ ಬಾರಿಗೆ ಫೈನಲ್​ಗೇರಿದ ಕರ್ನಾಟಕ..!
ಕರ್ನಾಟಕ ತಂಡ
Follow us on

ವಿಜಯ್ ಹಜಾರೆಯ ಟ್ರೋಫಿಯಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ, ಹರಿಯಾಣ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ವಡೋದರಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 237 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ ಹಾಗೂ ಸ್ಮರಣ್ ರವಿಚಂದ್ರನ್​ರ ಅರ್ಧಶತಕದ ನೆರವಿನಿಂದ 47.2 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಈ ಮೂಲಕ ಐದನೇ ಬಾರಿಗೆ ಈ ಟೂರ್ನಿಯಲ್ಲಿ ಫೈನಲ್​ಗೇರಿದ ಸಾಧನೆ ಮಾಡಿದೆ.

ಹರಿಯಾಣಕ್ಕೆ ರಾಣಾ- ಅಂಕಿತ್ ಆಸರೆ

ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡಕ್ಕೆ ಮೊದಲ ವಿಕೆಟ್​ಗೆ 32 ರನ್​ಗಳ ಸಾಧಾರಣ ಆರಂಭ ಸಿಕ್ಕಿತು. ಆರಂಭಿಕ ಅರ್ಶ್ ರಂಗ ಕೇವಲ 10 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆ ನಂತರ ಜೊತೆಯಾದ ಹಿಮಾಂಶು ರಾಣಾ ಹಾಗೂ ಅಂಕಿತ್ ರಾಜೇಶ್ ಅರ್ಧಶತಕದ ಜೊತೆಯಾಟವನ್ನಾಡಿದರು. ಆದರೆ ಈ ಇಬ್ಬರು ಕೂಡ ಅರ್ಧಶತಕದ ಹೊಸ್ತಿಲಿನಲಿ ಎಡವಿ ಕ್ರಮವಾಗಿ 44 ಹಾಗೂ 48 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

237 ರನ್​ಗಳ ಟಾರ್ಗೆಟ್

ಕೆಳಕ್ರಮಾಂಕದಲ್ಲಿ ದಿನೇಶ್ 20 ರನ್, ರಾಹುಲ್ ತೇವಾಟಿಯಾ 22 ರನ್, ಸಮಿತ್ ಕುಮಾರ್ 21 ರನ್ ಹಾಗೂ ಅನುಜ್ ಹೀರಾ 23 ರನ್​ಗಳ ಕಾಣಿಕೆ ನೀಡಿ ತಂಡವನ್ನು 237 ರನ್​ಗಳಿಗೆ ಕೊಂಡೊಯ್ದರು. ಇತ್ತ ಕರ್ನಾಟಕ ಪರ ಬೌಲಿಂಗ್​ನಲ್ಲಿ ಮಿಂಚಿದ ಅಭಿಲಾಶ್ ಶೆಟ್ಟಿ ಪ್ರಮುಖ 4 ವಿಕೆಟ್ ಪಡೆದರೆ, ಶ್ರೇಯಾಸ್ ಗೋಪಾಲ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಹಾಗೂ ಹಾರ್ದಿಕ್ ರಾಜ್ 1 ವಿಕೆಟ್ ಉರುಳಿಸಿದರು.

ಕರ್ನಾಟಕಕ್ಕೆ ಆರಂಭಿಕ ಆಘಾತ

ಹರಿಯಾಣ ನೀಡಿದ 237 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಮಯಾಂಕ್ ಆಗರ್ವಾಲ್ ಈ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡಲು ವಿಫಲರಾದರು. ಇನ್ನಿಂಗ್ಸ್​ನ ಮೊದಲ ಓವರ್​ನಲ್ಲೇ ಮಯಾಂಕ್ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಬೇಕಾಯಿತು. ಆ ನಂತರ ಬಂದ ಕೆವಿ ಅನೀಶ್ ಕೂಡ 22 ರನ್​ಗಳಿಗೆ ಸುಸ್ತಾದರು. ಹೀಗಾಗಿ ತಂಡ 66 ರನ್ ಕಲೆಹಾಕುವಷ್ಟರಲ್ಲಿ ಪ್ರಮುಖ 2 ವಿಕೆಟ್​ಗಳನ್ನು ಕಳೆದುಕೊಂಡಿತು.

ಪಡಿಕ್ಕಲ್- ಸ್ಮರಣ್ ಗೆಲುವಿನ ಅರ್ಧಶತಕ

ಆದರೆ ಆ ಬಳಿಕ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಸ್ಮರಣ್ ರವಿಚಂದ್ರನ್ ತಲಾ ಅರ್ಧಶತಕ ಸಿಡಿಸಿದಲ್ಲದೆ ಶತಕದ ಜೊತೆಯಾಟವನ್ನಾಡಿದರು. ಈ ಹಂತದಲ್ಲಿ ಪಡಿಕ್ಕಲ್ 113 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 86 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪಡಿಕ್ಕಲ್ ನಂತರ ಬಂದ ಶ್ರೀಜಿತ್ ಕೂಡ 3 ರನ್​ಗಳಿಗೆ ಸುಸ್ತಾದರು. ಆದಾಗ್ಯೂ ಒಂದು ತುದಿಯಲ್ಲಿ ಗೆಲುವಿನ ಇನ್ನಿಂಗ್ಸ್ ಆಡಿದ ಸ್ಮರಣ್ 94 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ 76 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಶ್ರೇಯಸ್ ಗೋಪಾಲ್ ಅಜೇಯ 23 ರನ್ ಹಾಗೂ ಅಭಿನವ್ ಅಜೇಯ 3 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ