ವಡೋದರಾದ ಮೋತಿ ಬಾಗ್ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ನೇತೃತ್ವದ ಬರೋಡಾ ತಂಡವನ್ನು 5 ರನ್ಗಳಿಂದ ಮಣಿಸಿದ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ. ರಣರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಬರೋಡಾ ಗೆಲುವಿಗೆ ಕೊನೆಯ ಓವರ್ನಲ್ಲಿ 12 ರನ್ಗಳ ಅವಶ್ಯಕತೆ ಇತ್ತು. ಆದರೆ ಅಂತಿಮವಾಗಿ ಬರೋಡಾ ತಂಡ 276 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಹೀಗಾಗಿ ಕರ್ನಾಟಕ ತಂಡಕ್ಕೆ 5 ರನ್ಗಳ ರೋಚಕ ಜಯ ಲಭಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ ಅವರ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 281 ರನ್ ಕಲೆಹಾಕಿತು. ಇತ್ತ ಬರೋಡಾ ತಂಡದ ಪರ ಆರಂಭಿಕ ಶಾಶ್ವತ್ ರಾವತ್ ಶತಕ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಪಂದ್ಯದಲ್ಲಿ ಟಾಸ್ ಗೆದ್ದ ಬರೋಡಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಸಾಧಾರಣ ಆರಂಭ ಸಿಕ್ಕಿತು. ಶತಕಗಳ ವೀರ ಮಯಾಂಕ್ ಅಗರ್ವಾಲ್ ನಿರ್ಧಾರಕ ಪಂದ್ಯದಲ್ಲಿ ಮಿಂಚಲು ಸಾಧ್ಯವಾಗದೆ ಕೇವಲ 6 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಆ ಬಳಿಕ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಕೆವಿ ಅವಿನಾಶ್ 132 ರನ್ಗಳ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇದಲ್ಲದೆ ಇಬ್ಬರು ಕೂಡ ಅರ್ಧಶತಕ ದಾಖಲಿಸಿದರು. ಆದರೆ ಈ ಹಂತದಲ್ಲಿ ಅವಿನಾಶ್ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಅವಿನಾಶ್ ವಿಕೆಟ್ ಪತನದ ಬಳಿಕ ದೇವದತ್ ಪಡಿಕ್ಕಲ್ ಕೂಡ ಸ್ಮರಣೀಯ ಶತಕ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಪಡಿಕ್ಕಲ್ ತಮ್ಮ ಇನ್ನಿಂಗ್ಸ್ನಲ್ಲಿ 99 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 102 ರನ್ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ವಿಕೆಟ್ ಪತನದ ಬಳಿಕ ಜೊತೆಯಾದ ಸ್ಮರಣ್ ಹಾಗೂ ಅಭಿನವ್ ಕೂಡ 49 ರನ್ಗಳ ಜೊತೆಯಾಟ ನೀಡುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಸ್ಮರಣ್ ರವಿಚಂದ್ರನ್ 28 ರನ್ಗಳ ಅಲ್ಪ ಕಾಣಿಕೆ ನೀಡಿ ವಿಕೆಟ್ ಕೈಚೆಲ್ಲಿದರೆ, ಹಾರ್ದಿಕ್ ಸೊನ್ನೆ ಸುತ್ತಿದರು. ಶ್ರೇಯಸ್ ಗೋಪಾಲ್ ಅವರ ಇನ್ನಿಂಗ್ಸ್ 16 ರನ್ಗಳಿಗೆ ಅಂತ್ಯಗೊಂಡರೆ, ವೇಗಿ ಪ್ರಸಿದ್ಧ್ ಕೃಷ್ಣ 12 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಅಭಿನವ್ ಮನೋಹರ್ ಕೂಡ 21 ರನ್ಗಳ ಇನ್ನಿಂಗ್ಸ್ ಆಡಿ ತಂಡವನ್ನು 281 ರನ್ಗಳಿಗೆ ಕೊಂಡೊಯ್ದರು.
ಕರ್ನಾಟಕ ನೀಡಿದ 281 ರನ್ಗಳ ಗುರಿ ಬೆನ್ನಟ್ಟಿದ ಬರೋಡಾ ತಂಡಕ್ಕೂ ಸಾಧಾರಣ ಆರಂಭ ಸಿಕ್ಕಿತು. ಆರಂಭಿಕ ನಿನಾದ್ 14 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ನಂತರ ಜೊತೆಯಾದ ಅತಿಥ್ ಹಾಗೂ ಶಾಶ್ವತ್ ಶತಕದ ಜೊತೆಯಾಟವನ್ನಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಅತಿಥ್ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದ ಬಳಿಕ ಬರೋಡಾದ ಇನ್ನಿಂಗ್ಸ್ ತತ್ತರಿಸಿತು. ನಾಯಕ ಕೃನಾಲ್ ಕೂಡ 30 ರನ್ ಬಾರಿಸಲಷ್ಟೇ ಶಕ್ತರಾದರು. ಆದರೆ ತಂಡದ ಪರ ಕೊನೆಯವರೆಗೂ ಹೋರಾಡಿದ ಆರಂಭಿಕ ಶಾಶ್ವತ್ ಶತಕದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಶಾಶ್ವತ್ ಹೊರತಾಗಿ ಕೊನೆಯಲ್ಲಿ ಭಾನು ಪಾನಿಯಾ ಕೂಡ 22 ರನ್ಗಳ ಕಾಣಿಕೆ ಕೊಟ್ಟರಾದರೂ ಅದು ಗೆಲುವಿಗೆ ಸಾಕಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:35 pm, Sat, 11 January 25