Vijay Hazare Trophy: ಟೂರ್ನಿಯಲ್ಲಿ 4ನೇ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್; ಕರ್ನಾಟಕಕ್ಕೆ 6ನೇ ಜಯ

| Updated By: ಪೃಥ್ವಿಶಂಕರ

Updated on: Jan 05, 2025 | 7:30 PM

Vijay Hazare Trophy: ಕರ್ನಾಟಕ ಕ್ರಿಕೆಟ್ ತಂಡವು ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಗಾಲ್ಯಾಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರಿಂದಾಗಿ ತಂಡವು 7 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ ಅವರು 116 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ಬೌಲರ್‌ಗಳು ಸಹ ಅತ್ಯುತ್ತಮ ಪ್ರದರ್ಶನ ನೀಡಿದರು.

Vijay Hazare Trophy: ಟೂರ್ನಿಯಲ್ಲಿ 4ನೇ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್; ಕರ್ನಾಟಕಕ್ಕೆ 6ನೇ ಜಯ
ಮಯಾಂಕ್ ಅಗರ್ವಾಲ್ (ಪ್ರಾತಿನಿಧಿಕ ಚಿತ್ರ)
Follow us on

ವಿಜಯ್ ಹಜಾರೆಯಲ್ಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಆರನೇ ಜಯ ದಾಖಲಿಸಿದೆ. ಈ ಟೂರ್ನಿಯಲ್ಲಿ ಇದುವರೆಗೆ 7 ಪಂದ್ಯಗಳನ್ನಾಡಿರುವ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 1 ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದೆ. ಈ ಮೂಲಕ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇಂದು ನಡೆದ ನಾಗಲ್ಯಾಂಡ್ ವಿರುದ್ಧದ ಪಂದ್ಯದಲ್ಲೂ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡ ಬರೋಬ್ಬರಿ 9 ವಿಕೆಟ್​​ಗಳ ಭರ್ಜರಿ ಜಯ ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾಗಲ್ಯಾಂಡ್ ತಂಡ 206 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಕೇವಲ 1 ವಿಕೆಟ್ ಕಳೆದುಕೊಂಡು 37.5 ಓವರ್​ಗಳಲ್ಲಿ ಜಯದ ನಗೆ ಬೀರಿತು.

ನಾಗಲ್ಯಾಂಡ್​ಗೆ ಆರಂಭಿಕ ಆಘಾತ

ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ನಾಗಲ್ಯಾಂಡ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕರಿಬ್ಬರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರಲ್ಲಿ ಸೆದೆಝಾಲಿ ರೂಪೆರೊ ಇನ್ನಿಂಗ್ಸ್​ನ ಮೊದಲ ಓವರ್​ನ ಮೊದಲ ಎಸೆತದಲ್ಲೇ ಕೌಶಿಕ್​ಗೆ ಬಲಿಯಾದರೆ, ಮತ್ತೊಬ್ಬ ಆರಂಭಿಕ ದೇಗಾ ನಿಶ್ಚಲ್ ಕೂಡ ಕೇವಲ 1 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ಮತ್ತೆ ಮಿಂಚಿದ ಶ್ರೇಯಸ್

ಆ ಬಳಿಕ ಬಂದವರು ಕೂಡ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲುವ ಕೆಲಸ ಮಾಡಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ರಾಂಗ್ಸೆನ್ ಜೊನಾಥನ್ ನಾಯಕನ ಇನ್ನಿಂಗ್ಸ್ ಆಡಿ 73 ಎಸೆತಗಳಲ್ಲಿ 51 ರನ್​ಗಳ ಕಾಣಿಕೆ ನೀಡಿದರು. ಇವರಿಗೆ ಸಾಥ್ ನೀಡಿದ ಚೇತನ್ ಬಿಸ್ಟ್ ಕೂಡ 77 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರನ್ನು ಹೊರತುಪಡಿಸಿ ತಂಡದಿಂದ ಮತ್ತ್ಯಾವ ಆಟಗಾರನಿಗೂ ಅರ್ಧಶತಕದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಇಡೀ ತಂಡಕ್ಕೆ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ 48.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಇತ್ತ ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 2 ವಿಕೆಟ್ ಪಡೆದರು. ಉಳಿದವರಿಗೆ ತಲಾ ಒಂದೊಂದು ವಿಕೆಟ್ ಸಿಕ್ಕಿತು.

ಮಯಾಂಕ್ ಗೆಲುವಿನ ಶತಕ

ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 9 ರನ್​ಗಳಿರುವಾಗ ಆರಂಭಿಕ ನಿಖಿನ್ ಜೋಶ್ ಕೇವಲ 1 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು. ಆದರೆ ಆ ಬಳಿಕ ಜೊತೆಯಾದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಕೆವಿ ಅವಿನಾಶ್ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಅಜೇಯರಾಗಿ ಮರಳಿದರು. ಈ ವೇಳೆ ನಾಯಕ ಮಯಾಂಕ್ ಟೂರ್ನಿಯ 4ನೇ ಶತಕವನ್ನು ಪೂರ್ಣಗೊಳಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 119 ಎಸೆತಗಳನ್ನು ಎದುರಿಸಿದ ಮಯಾಂಕ್ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 116 ರನ್ ಕಲೆಹಾಕಿದರೆ, ಅವಿನಾಶ್ 95 ಎಸೆತಗಳಲ್ಲಿ 10 ಬೌಂಡರಿ ಸಹಿತ 82 ರನ್​ಗಳ ಅಜೇಯ ಕೊಡುಗೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ