ಟೀಂ ಇಂಡಿಯಾವನ್ನು ಟೆಸ್ಟ್ ಜರ್ಸಿಯಲ್ಲಿ ನೋಡಲು ಇನ್ನೂ 6 ತಿಂಗಳು ಕಾಯಬೇಕು
Team India's Road to WTC 2025-27: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತಿರುವ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿದಿದೆ. ಇದೀಗ ಟೀಂ ಇಂಡಿಯಾ 2025-27ರ ಡಬ್ಲ್ಯಟಿಸಿ ಅಭಿಯಾನವನ್ನು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭಿಸಲಿದೆ. ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ ತಿಂಗಳಲ್ಲಿ ಆರಂಭವಾಗಲಿದೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆದ್ದು ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೇರಬೇಕೆಂಬ ಇರಾದೆಯೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಖಾಲಿ ಕೈಯಲ್ಲಿ ತವರಿಗೆ ವಾಪಸ್ಸಾಗುತ್ತಿದೆ. ಉಭಯ ತಂಡಗಳ ನಡುವೆ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡ ಆಸ್ಟ್ರೇಲಿಯಾ ತಂಡ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪೈನಲ್ಗೇರಿದರೆ, ಇತ್ತ ಟೀಂ ಇಂಡಿಯಾ ಸರಣಿ ಸೋತಿದಲ್ಲದೆ, ಡಬ್ಲ್ಯುಟಿಸಿ ಫೈನಲ್ ರೇಸ್ನಿಂದಲೂ ಹೊರಬಿದ್ದಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ನಾಲ್ಕನೇ ಆವೃತ್ತಿಯಲ್ಲಾದರೂ ಮತ್ತೆ ಫೈನಲ್ಗೇರುವ ಗುರಿ ಇಟ್ಟುಕೊಂಡಿರುವ ಟೀಂ ಇಂಡಿಯಾ ಅದಕ್ಕಾಗಿ ಇನ್ನು ಆರು ತಿಂಗಳು ಕಾಯಬೇಕಿದೆ.
ವಾಸ್ತವವಾಗಿ ಡಬ್ಲ್ಯುಟಿಸಿ ಮೂರನೇ ಆವೃತ್ತಿಯ ಫೈನಲ್ ಪಂದ್ಯ ಜೂನ್ 11 ರಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಆ ಬಳಿಕವಷ್ಟೇ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಚಾಲ್ತಿ ಸಿಗಲಿದೆ. ಇದರ ಭಾಗವಾಗಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-2027 ಅಭಿಯಾನವನ್ನು ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಪ್ರಾರಂಭಿಸಲಿದೆ. ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗಾಗಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ
- ಮೊದಲ ಪಂದ್ಯ: ಜೂನ್ 20 ರಿಂದ ಜೂನ್ 24, ಹೆಡಿಂಗ್ಲಿ ಲೀಡ್ಸ್
- ಎರಡನೇ ಪಂದ್ಯ: ಜುಲೈ 2 ರಿಂದ ಜುಲೈ 6, ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
- ಮೂರನೇ ಪಂದ್ಯ: ಜುಲೈ 10 ರಿಂದ ಜುಲೈ 14, ಲಾರ್ಡ್ಸ್, ಲಂಡನ್
- ನಾಲ್ಕನೇ ಪಂದ್ಯ: ಜುಲೈ 23 ರಿಂದ 27 ಜುಲೈ, ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
- ಐದನೇ ಪಂದ್ಯ: ಜುಲೈ 31 ರಿಂದ ಆಗಸ್ಟ್ 4, ಕೆನ್ನಿಂಗ್ಟನ್ ಓವಲ್, ಲಂಡನ್
ಭಾರತಕ್ಕೆ ಇಂಗ್ಲೆಂಡ್ ಪ್ರವಾಸ
ಆದರೆ ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ಮೊದಲು ಭಾರತಕ್ಕೆ ಬರಲಿದೆ. ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿ ನಡೆಯಲ್ಲಿದೆ. ಈಗಾಗಲೇ ಈ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ತಂಡದ ನಾಯಕತ್ವವನ್ನು ಜೋಸ್ ಬಟ್ಲರ್ ಮತ್ತೆ ವಹಿಸಿಕೊಂಡಿದ್ದಾರೆ. ಇವರಲ್ಲದೆ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಕೂಡ ನಿಯಮಿತ ಓವರ್ಗಳ ಮಾದರಿಗೆ ಮತ್ತೊಮ್ಮೆ ಮರಳಿದ್ದಾರೆ. ಆದರೆ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಈ ಎರಡೂ ಸರಣಿಗಳಿಂದಲೂ ಹೊರಗುಳಿದಿದ್ದಾರೆ. ಇನ್ನ ಟೀಂ ಇಂಡಿಯಾದ ವಿಚಾರಕ್ಕೆ ಬರುವುದಾದರೆ,, ಇಷ್ಟರಲ್ಲೇ ಈ ಸರಣಿಗೆ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ