Vijay Hazare Trophy: ಟೂರ್ನಿಯಲ್ಲಿ 4ನೇ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್; ಕರ್ನಾಟಕಕ್ಕೆ 6ನೇ ಜಯ
Vijay Hazare Trophy: ಕರ್ನಾಟಕ ಕ್ರಿಕೆಟ್ ತಂಡವು ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಗಾಲ್ಯಾಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರಿಂದಾಗಿ ತಂಡವು 7 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ ಅವರು 116 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ಬೌಲರ್‌ಗಳು ಸಹ ಅತ್ಯುತ್ತಮ ಪ್ರದರ್ಶನ ನೀಡಿದರು.
ವಿಜಯ್ ಹಜಾರೆಯಲ್ಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಆರನೇ ಜಯ ದಾಖಲಿಸಿದೆ. ಈ ಟೂರ್ನಿಯಲ್ಲಿ ಇದುವರೆಗೆ 7 ಪಂದ್ಯಗಳನ್ನಾಡಿರುವ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 1 ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದೆ. ಈ ಮೂಲಕ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇಂದು ನಡೆದ ನಾಗಲ್ಯಾಂಡ್ ವಿರುದ್ಧದ ಪಂದ್ಯದಲ್ಲೂ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡ ಬರೋಬ್ಬರಿ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾಗಲ್ಯಾಂಡ್ ತಂಡ 206 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಕೇವಲ 1 ವಿಕೆಟ್ ಕಳೆದುಕೊಂಡು 37.5 ಓವರ್ಗಳಲ್ಲಿ ಜಯದ ನಗೆ ಬೀರಿತು.
ನಾಗಲ್ಯಾಂಡ್ಗೆ ಆರಂಭಿಕ ಆಘಾತ
ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನಾಗಲ್ಯಾಂಡ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕರಿಬ್ಬರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರಲ್ಲಿ ಸೆದೆಝಾಲಿ ರೂಪೆರೊ ಇನ್ನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲೇ ಕೌಶಿಕ್ಗೆ ಬಲಿಯಾದರೆ, ಮತ್ತೊಬ್ಬ ಆರಂಭಿಕ ದೇಗಾ ನಿಶ್ಚಲ್ ಕೂಡ ಕೇವಲ 1 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಮತ್ತೆ ಮಿಂಚಿದ ಶ್ರೇಯಸ್
ಆ ಬಳಿಕ ಬಂದವರು ಕೂಡ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲುವ ಕೆಲಸ ಮಾಡಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ರಾಂಗ್ಸೆನ್ ಜೊನಾಥನ್ ನಾಯಕನ ಇನ್ನಿಂಗ್ಸ್ ಆಡಿ 73 ಎಸೆತಗಳಲ್ಲಿ 51 ರನ್‌ಗಳ ಕಾಣಿಕೆ ನೀಡಿದರು. ಇವರಿಗೆ ಸಾಥ್ ನೀಡಿದ ಚೇತನ್ ಬಿಸ್ಟ್ ಕೂಡ 77 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರನ್ನು ಹೊರತುಪಡಿಸಿ ತಂಡದಿಂದ ಮತ್ತ್ಯಾವ ಆಟಗಾರನಿಗೂ ಅರ್ಧಶತಕದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಇಡೀ ತಂಡಕ್ಕೆ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ 48.3 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಇತ್ತ ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 2 ವಿಕೆಟ್ ಪಡೆದರು. ಉಳಿದವರಿಗೆ ತಲಾ ಒಂದೊಂದು ವಿಕೆಟ್ ಸಿಕ್ಕಿತು.
ಮಯಾಂಕ್ ಗೆಲುವಿನ ಶತಕ
ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 9 ರನ್ಗಳಿರುವಾಗ ಆರಂಭಿಕ ನಿಖಿನ್ ಜೋಶ್ ಕೇವಲ 1 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಆದರೆ ಆ ಬಳಿಕ ಜೊತೆಯಾದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಕೆವಿ ಅವಿನಾಶ್ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಅಜೇಯರಾಗಿ ಮರಳಿದರು. ಈ ವೇಳೆ ನಾಯಕ ಮಯಾಂಕ್ ಟೂರ್ನಿಯ 4ನೇ ಶತಕವನ್ನು ಪೂರ್ಣಗೊಳಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 119 ಎಸೆತಗಳನ್ನು ಎದುರಿಸಿದ ಮಯಾಂಕ್ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 116 ರನ್ ಕಲೆಹಾಕಿದರೆ, ಅವಿನಾಶ್ 95 ಎಸೆತಗಳಲ್ಲಿ 10 ಬೌಂಡರಿ ಸಹಿತ 82 ರನ್‌ಗಳ ಅಜೇಯ ಕೊಡುಗೆ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ