
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭಾರತ (South Africa vs India) ಯಶಸ್ವಿಯಾಗಿ ಮುಗಿಸಿದೆ. ಕಠಿಣವಾಗಿದ್ದ ಪ್ರವಾಸದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡರೆ, ಟಿ20 ಸರಣಿಯನ್ನು ಸಮಬಲ ಸಾಧಿಸಿತು. ಕೊನೆಯದಾಗಿ ನಡೆದ ಎರಡು ಟೆಸ್ಟ್ ಪಂದ್ಯ ಕೂಡ 1-1 ಅಂತರದಿಂದ ಡ್ರಾ ಆಯಿತು. ಭಾರತೀಯ ಪುರುಷರ ಕ್ರಿಕೆಟ್ ತಂಡವು ಇದೀಗ ಮೂರು ಪಂದ್ಯಗಳ ಟಿ20I ಸರಣಿಯಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲು ಸಜ್ಜಾಗಬೇಕಿದೆ. ಏಷ್ಯಾದ ಎರಡು ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಯು ಭಾರತದಲ್ಲಿ ನಡೆಯಲಿದ್ದು, ಜನವರಿ 11 ರಂದು ಮೊಹಾಲಿಯಲ್ಲಿ ಪ್ರಾರಂಭವಾಗಲಿದೆ. ಎರಡನೇ ಪಂದ್ಯ ಜನವರಿ 14 ರಂದು ಇಂದೋರ್‌ನಲ್ಲಿ ಮತ್ತು ಅಂತಿಮ ಪಂದ್ಯ ಜನವರಿ 17 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಶುಕ್ರವಾರ (ಜನವರಿ 5) ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಸರಣಿಗೆ ಭಾರತೀಯ ಆಯ್ಕೆಗಾರರು ತಂಡವನ್ನು ಪ್ರಕಟ ಮಾಡಲಿದ್ದಾರೆ. ತಂಡದ ಘೋಷಣೆಗೆ ಮುಂಚಿತವಾಗಿ, ಬ್ಯಾಟಿಂಗ್ ಸೂಪರ್‌ಸ್ಟಾರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪುನಃ ಭಾರತಕ್ಕಾಗಿ ಟಿ20 ಕ್ರಿಕೆಟ್ ಆಡಲು ಉತ್ಸುಕರಾಗಿದ್ದಾರೆ ಎಂದು ವರದಿಗಳಿವೆ. ನವೆಂಬರ್ 10, 2022 ರಂದು ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ 2022 ರ ಎರಡನೇ ಸೆಮಿಫೈನಲ್‌ನಲ್ಲಿ ಮೆನ್ ಇನ್ ಬ್ಲೂ 10-ವಿಕೆಟ್‌ಗಳ ಸೋಲಿನ ನಂತರ ಇವರಿಬ್ಬರು ಭಾರತಕ್ಕಾಗಿ ಒಂದೇ ಒಂದು ಟಿ20I ಆಡಿಲ್ಲ.
IND vs SA: ಐತಿಹಾಸಿಕ ಗೆಲುವಿನೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ..!
ಇದೀಗ 2024ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಈ ಜೋಡಿ ಪುನರಾಗಮನಕ್ಕೆ ಸಿದ್ಧವಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ರೋಹಿತ್ ಮತ್ತು ಕೊಹ್ಲಿ ಅವರು ಚುಟುಕು ಕ್ರಿಕೆಟ್ನ ಆಯ್ಕೆಗೆ ಲಭ್ಯವಿದ್ದಾರೆ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ಹೀಗಾಗಿ ಇವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20I ಗಳಿಗೆ ಆಯ್ಕೆ ಮಾಡಲಿದ್ದಾರಂತೆ. ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಸರಣಿಯು ಟಿ20 ವಿಶ್ವಕಪ್‌ಗೆ ಮೊದಲು ಭಾರತದ ಕೊನೆಯ ದ್ವಿಪಕ್ಷೀಯ ಟಿ20I ಸರಣಿಯಾಗಿದೆ. ಟಿ20 ವಿಶ್ವಕಪ್ ಈ ವರ್ಷದ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿದೆ.
ಇನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20Iಗಳಿಂದ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕೇಪ್ ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಬುಮ್ರಾ ಮತ್ತು ಸಿರಾಜ್ ಸಾಕಷ್ಟು ಶ್ರಮವಹಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ, ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದರು ಮತ್ತು ಬುಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ 6 ಬ್ಯಾಟರ್‌ಗಳನ್ನು ಔಟ್ ಮಾಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ