ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಟಿ20 ವಿಶ್ವಕಪ್ ಬಳಿಕ ನಿವೃತ್ತಿಯಾಗುವ ಸಾಧ್ಯತೆಯಿದೆ ಎಂದು ಪಾಕಿಸ್ತಾನ್ ತಂಡದ ಮಾಜಿ ವೇಗಿ ಶೊಯೇಬ್ ಅಖ್ತರ್ (Shoaib Akhtar) ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, ವಿರಾಟ್ ಕೊಹ್ಲಿ 104 ಟಿ20 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಅವರು ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಬಹುದು ಎಂದಿದ್ದಾರೆ.
ಕಳೆದ ಕೆಲ ತಿಂಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಕಿಂಗ್ ಕೊಹ್ಲಿ ಈ ಬಾರಿಯ ಏಷ್ಯಾಕಪ್ ಮೂಲಕ ಕಂಬ್ಯಾಕ್ ಮಾಡಿದ್ದರು. ಅಲ್ಲದೆ ಮೂರು ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ್ದರು. ಹಾಗೆಯೇ ಈ ಬಾರಿ ಏಷ್ಯಾಕಪ್ನಲ್ಲಿ ಕೇವಲ 5 ಪಂದ್ಯಗಳಿಂದ 271 ರನ್ ಕಲೆಹಾಕುವ ಮೂಲಕ ಅತ್ಯಧಿಕ ರನ್ ಬಾರಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
ಇದೀಗ ಟಿ20 ವಿಶ್ವಕಪ್ನಲ್ಲೂ ಟೀಮ್ ಇಂಡಿಯಾ ಪಾಲಿಗೆ ವಿರಾಟ್ ಕೊಹ್ಲಿಯ ಭರ್ಜರಿ ಫಾರ್ಮ್ ಟ್ರಂಪ್ ಕಾರ್ಡ್ ಆಗಲಿದೆ. ಆದರೆ ಫಾರ್ಮ್ಗೆ ಮರಳುತ್ತಿದ್ದಂತೆ ವಿರಾಟ್ ಕೊಹ್ಲಿ ನಿವೃತ್ತಿಯಾಗಲಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಶೊಯೇಬ್ ಅಖ್ತರ್ ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಖ್ತರ್, ಈಗಾಗಲೇ ನೂರಕ್ಕೂ ಅಧಿಕ ಟಿ20 ಪಂದ್ಯಗಳಲ್ಲಿ ಕೊಹ್ಲಿ ಟೀಮ್ ಇಂಡಿಯಾ ಪ್ರತಿನಿಧಿಸಿದ್ದಾರೆ. ಹಾಗಾಗಿ ನನ್ನ ಪ್ರಕಾರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೂಲಕ ಅವರ 20 ಓವರ್ಗಳ ಸ್ವರೂಪದಿಂದ ನಿವೃತ್ತರಾಗಬಹುದು. ಏಕೆಂದರೆ ಅವರು ಇತರೆ ಸ್ವರೂಪಗಳಲ್ಲಿ, ಅಂದರೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಕೆರಿಯರ್ ವಿಸ್ತರಿಸಲು ಈ ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎಂದು ಅಖ್ತರ್ ಹೇಳಿದ್ದಾರೆ.
ಕಳೆದ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ವಿರಾಟ್ ಕೊಹ್ಲಿ ಇದೀಗ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ. ಇದೇ ವೇಳೆ ಮಾಜಿ ಆಟಗಾರರ ಹೇಳಿಕೆಗಳು ಹೊಸ ಚರ್ಚೆಗೆ ಕಾರಣವಾಗುತ್ತಿದೆ. ಏಕೆಂದರೆ ಈ ಹಿಂದೆ ಫಾರ್ಮ್ ಬಗ್ಗೆ ಟೀಕಿಸುತ್ತಿದ್ದ ಕೆಲ ಮಾಜಿ ಆಟಗಾರರಿಗೆ ಕೊಹ್ಲಿ ಏಷ್ಯಾಕಪ್ ಮೂಲಕ ಉತ್ತರ ನೀಡಿದ್ದಾರೆ. ಇದರ ಬೆನ್ನಲ್ಲೇ ಅವರ ನಿವೃತ್ತಿ ಚರ್ಚೆಗಳು ಶುರುವಾಗಿರುವುದು ವಿಪರ್ಯಾಸ.