AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 59 ರನ್​…. ಸಚಿನ್ ವಿಶ್ವ ದಾಖಲೆ ಮೇಲೆ ಕೊಹ್ಲಿ ಕಣ್ಣು!

ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಬರೆದಿಟ್ಟಿರುವ ರನ್‌ ರಾಶಿಯನ್ನು ಮುಟ್ಟಲು ಸಾಧ್ಯವೇ ಎಂಬ ಪ್ರಶ್ನೆ ದಶಕಗಳಿಂದ ಇತ್ತು. ಆದರೆ ಆ ಇತಿಹಾಸದ ಪುಟಗಳನ್ನು ಮರುಬರೆಯಲು ಒಬ್ಬನೇ ಒಬ್ಬ ಬ್ಯಾಟರ್‌ಗೆ ಸಾಧ್ಯ ಎಂಬುದನ್ನುವಿರಾಟ್ ಕೊಹ್ಲಿ ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಮಾಸ್ಟರ್ ಬ್ಲಾಸ್ಟರ್ ಹೆಸರಿನಲ್ಲಿರುವ ಭರ್ಜರಿ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ಕೇವಲ 59 ರನ್​.... ಸಚಿನ್ ವಿಶ್ವ ದಾಖಲೆ ಮೇಲೆ ಕೊಹ್ಲಿ ಕಣ್ಣು!
Virat - SachinImage Credit source: GettyImages
ಝಾಹಿರ್ ಯೂಸುಫ್
|

Updated on:Sep 27, 2026 | 7:37 AM

Share

ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎಂಬ ಮಾತಿದೆ. ಆದರೆ, ಆ ದಾಖಲೆಯನ್ನು ಬರೆದವರು ಸಾಕ್ಷಾತ್ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಆಗಿದ್ದರೆ, ಅದನ್ನು ಮುರಿಯುವ ಸಾಮರ್ಥ್ಯ ಮತ್ಯಾರಿಗಿದೆ? ಈ ಪ್ರಶ್ನೆಗೆ ಸದ್ಯಕ್ಕೆ ಜಗತ್ತಿನ ಮುಂದಿರುವ ಏಕೈಕ ಉತ್ತರ ವಿರಾಟ್ ಕೊಹ್ಲಿ! ಈಗಾಗಲೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ಹಲವು ಐತಿಹಾಸಿಕ ದಾಖಲೆಗಳನ್ನು ಧೂಳೀಪಟ ಮಾಡಿರುವ ಕೊಹ್ಲಿ, ಇದೀಗ ಕ್ರಿಕೆಟ್ ಲೋಕದ ಮತ್ತೊಂದು ಮಹಾನ್ ವರ್ಲ್ಡ್ ರೆಕಾರ್ಡ್ ಮುರಿಯುವ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ.

ಹೌದು, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೇವಲ 59 ರನ್​ಗಳಿಸಿದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಅದು ಕೂಡ ಏಕದಿನ ಕ್ರಿಕೆಟ್​ನಲ್ಲಿ ಅತೀ ಕಡಿಮೆ ಇನಿಂಗ್ಸ್​ಗಳ ಮೂಲಕ 15 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆಯೊಂದಿಗೆ ಎಂಬುದು ವಿಶೇಷ.

  • ಏಕದಿನ ಕ್ರಿಕೆಟ್​ನಲ್ಲಿ ಅತೀ ಕಡಿಮೆ ಇನಿಂಗ್ಸ್​ನಲ್ಲಿ 15 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.
  • ಸಚಿನ್ ತೆಂಡೂಲ್ಕರ್ 377 ಇನಿಂಗ್ಸ್​ಗಳ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 15000 ರನ್ ಪೂರೈಸಿದ್ದರು.

ಇದೀಗ ಈ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ 59 ರನ್​ಗಳ ಅವಶ್ಯಕತೆಯಿದೆ. ಇತ್ತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬ್ಯಾಟ್​ನಿಂದ 59 ರನ್​ಗಳು ಮೂಡಿಬಂದರೆ ವಿಶ್ವ ದಾಖಲೆ ಕೊಹ್ಲಿ ಪಾಲಾಗಲಿದೆ.

  • ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಈವರೆಗೆ 302 ಇನಿಂಗ್ಸ್ ಆಡಿದ್ದಾರೆ.
  • ಈ 302 ಇನಿಂಗ್ಸ್​ಗಳ ಮೂಲಕ ಕಿಂಗ್ ಕೊಹ್ಲಿ ಬರೋಬ್ಬರಿ 14,941 ರನ್ ಕಲೆಹಾಕಿದ್ದಾರೆ.
  • ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 59 ರನ್ ಬಾರಿಸಿದ 15 ಸಾವಿರ ರನ್​​ಗಳ ಸಾಧನೆ ಮಾಡಲಿದ್ದಾರೆ.

ಅಂದರೆ ತಿರುವನಂತಪುರದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 59 ರನ್​ಗಳಿಸಿದರೆ,  ಸಚಿನ್‌ಗಿಂತ ಸುಮಾರು 74 ಇನಿಂಗ್ಸ್ ಮುಂಚಿತವಾಗಿಯೇ ಈ ಐತಿಹಾಸಿಕ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸ್ವದೇಶಿ ದಾಖಲೆ ಮೇಲೂ ಕಣ್ಣು:

ಸ್ವದೇಶದಲ್ಲಿ ಅತಿ ಹೆಚ್ಚು ರನ್: ಭಾರತದ ನೆಲದಲ್ಲಿ ಸಚಿನ್ ತೆಂಡೂಲ್ಕರ್ 164 ಏಕದಿನ ಪಂದ್ಯಗಳಿಂದ 6,976 ರನ್ ಗಳಿಸಿದ್ದಾರೆ. ಪ್ರಸ್ತುತ ಕೊಹ್ಲಿ 130 ಪಂದ್ಯಗಳಿಂದ 6,867 ರನ್ ಗಳಿಸಿದ್ದು, ಸಚಿನ್ ದಾಖಲೆ ಮುರಿಯಲು ಇನ್ನು ಕೇವಲ 110 ರನ್ಗಳ ಅಗತ್ಯವಿದೆ.

7 ಸಾವಿರ ರನ್​ಗಳ ದಾಖಲೆ: ಸ್ವದೇಶಿ ಮೈದಾನದಲ್ಲಿ ಒಟ್ಟಾರೆ 7,000 ಏಕದಿನ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲು ವಿರಾಟ್‌ಗೆ ಇನ್ನು 133 ರನ್‌ಗಳು ಬೇಕಾಗಿವೆ.

ಸ್ವದೇಶಿ ಶತಕಗಳ ದಾಖಲೆ: ಭಾರತದಲ್ಲಿ ಸಚಿನ್ ಒಟ್ಟು 42 ಅಂತರರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಸದ್ಯ 41 ಶತಕಗಳೊಂದಿಗೆ ಕೇವಲ ಒಂದು ಹೆಜ್ಜೆ ಹಿಂದಿದ್ದಾರೆ. ಅಂದರೆ ವಿಂಡೀಸ್​ ವಿರುದ್ಧ ಸೆಂಚುರಿ ಸಿಡಿಸಿದರೆ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಬಹುದು.

ಇದನ್ನೂ ಓದಿ: ವಿಂಡೀಸ್ ವಿರುದ್ಧ ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್ ಜಗತ್ತಿನ ಮುಕುಟಪ್ರಾಯರಾಗಿದ್ದ ಸಚಿನ್ ತೆಂಡೂಲ್ಕರ್ ಅವರ ಈ ಭರ್ಜರಿ ದಾಖಲೆಗಳನ್ನು ವಿರಾಟ್ ಕೊಹ್ಲಿ ಮುರಿಯುವುದು ಬಹುತೇಕ ಖಚಿತ! ಆದರೆ, ಈ ಐತಿಹಾಸಿಕ ಮೈಲಿಗಲ್ಲು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೇ ಸಾಧ್ಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Published On - 7:36 am, Sun, 27 September 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More