ನಾಯಕನಾಗಿ ಗಿಲ್ ಯಶಸ್ವಿಯಾಗ್ತಾರಾ? ವಿರಾಟ್ ಕೊಹ್ಲಿ ಮುಕ್ತ ಮಾತು
ಟೀಮ್ ಇಂಡಿಯಾ ನಾಯಕನಾಗಿ ಶುಭ್ಮನ್ ಗಿಲ್ ಯಶಸ್ವಿಯಾಗಲಿದ್ದಾರಾ? ಈ ಕುತೂಹಲಕಾರಿ ಪ್ರಶ್ನೆಗೆ ಭಾರತ ಕಂಡಂತಹ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ವಿರಾಟ್ ಕೊಹ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅದು ಸಹ ಯಂಗ್ ಕ್ಯಾಪ್ಟನ್ ಶುಭ್ಮನ್ ಗಿಲ್ ಅವರನ್ನು ಹಾಡಿ ಹೊಗಳುವ ಮೂಲಕ ಎಂಬುದು ವಿಶೇಷ.

ಭಾರತ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಅವರ ನಾಯಕತ್ವದ ಶೈಲಿಯನ್ನು ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜಿಯೋಸ್ಟಾರ್ ವಾಹಿನಿಯೊಂದಿಗೆ ಮಾತನಾಡಿದ ಕೊಹ್ಲಿ, ಗಿಲ್ ಇನ್ನೂ ಈ ಜವಾಬ್ದಾರಿಗೆ ಹೊಸಬರಾಗಿದ್ದರೂ, ದೀರ್ಘಕಾಲದವರೆಗೆ ಭಾರತ ತಂಡವನ್ನು ಮುನ್ನಡೆಸುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸ್ಪಷ್ಟ ನಾಯಕತ್ವ:
“ಶುಭ್ಮನ್ ನಾಯಕನಾಗಿ ಇನ್ನೂ ಕಲಿಯುತ್ತಿದ್ದಾರೆ ಮತ್ತು ಈ ಪಾತ್ರಕ್ಕೆ ಹೊಸಬರಾಗಿದ್ದಾರೆ. ಆದರೆ ಭಾರತ ತಂಡವನ್ನು ಮುನ್ನಡೆಸಲು ಬೇಕಾದ ಸರಿಯಾದ ದೃಷ್ಟಿಕೋನ ಮತ್ತು ತೀವ್ರತೆ ಅವರಲ್ಲಿದೆ” ಎಂದು ಕೊಹ್ಲಿ ಹೊಗಳಿದ್ದಾರೆ. ಮೈದಾನದಲ್ಲಿ ಗಿಲ್ ತಂತ್ರಗಳನ್ನು ರೂಪಿಸುವ ಸ್ಪಷ್ಟತೆ ಮತ್ತು ಸರಿಯಾದ ಹಾದಿಯಲ್ಲಿ ತಂಡವನ್ನು ಮುನ್ನಡೆಸಬೇಕೆಂಬ ಅವರ ಹಂಬಲ ಕೊಹ್ಲಿಗೆ ಹೆಚ್ಚು ಇಷ್ಟವಾಗಿದೆ.
ವಿಭಿನ್ನವಾಗಿ ಯೋಚಿಸುವ ಗಿಲ್:
ಗಿಲ್ ಅವರ ಮೈದಾನದ ಕಾರ್ಯತಂತ್ರಗಳ ಬಗ್ಗೆ ಮಾತನಾಡಿದ ಕೊಹ್ಲಿ, “ಗಿಲ್ ಬ್ಯಾಟರ್‌ಗಳನ್ನು ಔಟ್ ಮಾಡಲು ವಿಭಿನ್ನ ಮಾರ್ಗಗಳನ್ನು ಹುಡುಕುತ್ತಾರೆ. ಇದು ಯಾವಾಗಲೂ ಒಂದು ಹೆಜ್ಜೆ ಮುನ್ನಡೆ ಕಾಯ್ದುಕೊಳ್ಳುವ ನಾಯಕನ ಲಕ್ಷಣವಾಗಿದೆ. ಅವರು ಹೊಸ ಮಾದರಿಯ ಫೀಲ್ಡ್ ಸೆಟ್ಟಿಂಗ್ ಮಾಡಲು, ಎದುರಾಳಿಗಳ ಮೇಲೆ ಒತ್ತಡ ಹೇರಲು ಮತ್ತು ಬೌಲರ್‌ಗಳೊಂದಿಗೆ ಸೂಕ್ತವಾಗಿ ಸಂವಹನ ನಡೆಸಲು ಹಿಂಜರಿಯುವುದಿಲ್ಲ” ಎಂದು ಹೇಳಿದ್ದಾರೆ. ಅನುಭವ ಹೆಚ್ಚಿದಂತೆ ಅವರ ನಾಯಕತ್ವದ ನಿರ್ಧಾರಗಳು ಇನ್ನಷ್ಟು ಉತ್ತಮಗೊಳ್ಳಲಿವೆ ಎಂದು ಅವರು ಆಶಿಸಿದ್ದಾರೆ.
ಕಳೆದ 18 ತಿಂಗಳುಗಳಿಂದ ಕೇವಲ ಒಂದು ಫಾರ್ಮ್ಯಾಟ್‌ಗೆ ಸೀಮಿತರಾಗಿರುವ ಬಗ್ಗೆ ಮಾತನಾಡಿದ ಕೊಹ್ಲಿ, “ಹಿಂದೆ ನಾನು ಆಡುವಾಗ ತಂಡವನ್ನು ಕುಸಿತದಿಂದ ರಕ್ಷಿಸಬೇಕು ಮತ್ತು ವಿಕೆಟ್ ಉಳಿಸಿಕೊಂಡು ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಬೇಕು” ಎಂಬ ದೊಡ್ಡ ಜವಾಬ್ದಾರಿ ಇರುತ್ತಿತ್ತು. ಆ ಒತ್ತಡದಿಂದಾಗಿ ಅವರು ತುಂಬಾ ಜಾಗರೂಕರಾಗಿ, ನಿಧಾನವಾಗಿ ಆಡಬೇಕಾಗುತ್ತಿತ್ತು.
ಆದರೆ ಕಳೆದ 18 ತಿಂಗಳುಗಳಿಂದ ಅವರು ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ಹೊರಬಂದು, ಕೇವಲ ಏಕದಿನ ಫಾರ್ಮ್ಯಾಟ್‌ಗೆ ಮಾತ್ರ ಸೀಮಿತವಾಗಿದ್ದೇನೆ. ಇದರ ಜೊತೆಗೆ ಈಗ ತಂಡದಲ್ಲಿ ರನ್ ಗಳಿಸಲು ಸಾಕಷ್ಟು ಯುವ ಆಟಗಾರರಿದ್ದಾರೆ. ಹೀಗಾಗಿ ಔಟ್ ಆಗುವ ಭಯವಿಲ್ಲದೆ ಆರಂಭದಿಂದಲೇ ನನ್ನ ನೈಸರ್ಗಿಕ ಶೈಲಿಯಲ್ಲಿ ಆಕ್ರಮಣಕಾರಿ ಶಾಟ್‌ಗಳನ್ನು ಆಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ಮೊರ್ಕೆಲ್ ಮಾಸ್ಟರ್ ಪ್ಲ್ಯಾನ್!
ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಕ್ರಿಕೆಟ್‌ನ ಯುವ ಮತ್ತು ಅನುಭವಿ ಪೀಳಿಗೆಯ ನಡುವಿನ ಅದ್ಭುತ ಬಾಂಧವ್ಯಕ್ಕೆ ವಿರಾಟ್ ಕೊಹ್ಲಿ ಅವರ ಈ ಮಾತುಗಳು ಕೈಗನ್ನಡಿಯಾಗಿವೆ. ತಂಡದ ಭವಿಷ್ಯದ ನಾಯಕನಾಗಿ ಹೊರಹೊಮ್ಮುತ್ತಿರುವ ಶುಭ್ಮನ್ ಗಿಲ್ ಬೆನ್ನಿಗೆ ದಿಗ್ಗಜ ಆಟಗಾರನೊಬ್ಬನ ಬೆಂಬಲ ಸಿಕ್ಕಿರುವುದು ಭಾರತೀಯ ಕ್ರಿಕೆಟ್‌ಗೆ ಶುಭ ಸಂಕೇತವಾಗಿದೆ.
ಇದರೊಂದಿಗೆ, ಸ್ವತಃ ಕೊಹ್ಲಿ ಅವರೇ ಯಾವುದೇ ಒತ್ತಡವಿಲ್ಲದೆ ತಮ್ಮ ಹಳೆಯ ಆಕ್ರಮಣಕಾರಿ ಶೈಲಿಗೆ ಮರಳಿರುವುದು ಮುಂಬರುವ ವೆಸ್ಟ್ ಇಂಡೀಸ್ ಸರಣಿಯಲ್ಲಿ ಅಭಿಮಾನಿಗಳಿಗೆ ರನ್ ಹಬ್ಬದ ರಸದೌತಣ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.
Published On - 3:15 pm, Sat, 26 September 26




