ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ (Border-Gavaskar Trophy) ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಈ ಮೂಲಕ ಟೀಮ್ ಇಂಡಿಯಾ 2-1 ಅಂತರದ ಮುನ್ನಡೆ ಪಡೆದುಕೊಂಡು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶ ಪಡೆದಿದೆ. ಕಾಂಗರೂ ಪಡೆ ಕಲೆಹಾಕಿದ ದೊಡ್ಡ ಮೊತ್ತಕ್ಕೆ ಕಠಿಣ ಪೈಪೋಟಿ ನೀಡಿದ ಭಾರತ ವಿರಾಟ್ ಕೊಹ್ಲಿ (Virat Kohli) ಹಾಗೂ ಶುಭ್ಮನ್ ಗಿಲ್ ಅವರ ಅಮೋಘ ಶತಕದ ನೆರವಿನಿಂದ ಡ್ರಾ ಸಾಧಿಸಲು ನೆರವಾಯಿತು. 186 ರನ್ ಕಲೆಹಾಕಿದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು. ಇದರ ನಡುವೆ ಪಂದ್ಯ ಮುಗಿದ ಬಳಿಕ ಆಸೀಸ್ ಆಟಗಾರರ ಜೊತೆ ಕೊಹ್ಲಿ ನಡೆದುಕೊಂಡ ರೀತಿ ಎಲ್ಲರ ಮನಗೆದ್ದಿತು.
ಆಸ್ಟ್ರೇಲಿಯದ ಇಬ್ಬರು ಆಟಗಾರರಾದ ಉಸ್ಮಾನ್ ಖವಾಜಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರಿಗೆ ವಿರಾಟ್ ಕೊಹ್ಲಿ ತಮ್ಮ ಹಸ್ತಾಕ್ಷರ ಇರುವ ಜೆರ್ಸಿಯನ್ನು ಸ್ಮರಣೀಯ ಉಡುಗೊರೆಯಾಗಿ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಆಸೀಸ್ ಆಟಗಾರರನ್ನು ಭೇಟಿಯಾಗಿ ತಮ್ಮ ಟೆಸ್ಟ್ ಟೀ-ಶರ್ಟ್‌ಗಳನ್ನು ಕೊಡುತ್ತಿರುವುದನ್ನು ಕಾಣಬಹುದಾಗಿದೆ. ಇಲ್ಲಿದೆ ನೋಡಿ ಆ ವಿಡಿಯೋ.
IND vs AUS: ಸತತ 4ನೇ ಟೆಸ್ಟ್ ಸರಣಿ ಸೋಲು; ಭಾರತದ ಮುಂದೆ ಕಾಂಗರೂಗಳ ಆಟ ನಡೆಯಲ್ಲ..!
King Kohli ? had some memorabilia to give to his Australian teammates post the final Test ????
Gestures like these ??#TeamIndia | #INDvAUS pic.twitter.com/inWCO8IOpe
— BCCI (@BCCI) March 13, 2023
ಮೂರು ವರ್ಷ, ಮೂರು ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಶತಕ ಬಂತು. 241 ಎಸೆತಗಳಲ್ಲಿ ಶತಕ ಸಾಧನೆ ತೋರಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು. ಇಷ್ಟು ಎಸೆತಗಳನ್ನು ಎದುರಿಸಿ ನಿಧಾನಗತಿಯಲ್ಲಿ ಶತಕ ಗಳಿಸಿರುವ ಅವರ ಎರಡನೇ ಇನ್ನಿಂಗ್ಸ್ ಇದಾಗಿದೆ. ಈ ಮೂಲಕ ಕೊಹ್ಲಿ ಅವರು ಟೆಸ್ಟ್ ಕರಿಯರ್ನಲ್ಲಿ 28ನೇ ಸೆಂಚುರಿ, ಹಾಗೆಯೇ ತಮ್ಮ ವೃತ್ತಿ ಜೀವನದ 75ನೇ ಶತಕವನ್ನೂ ಪೂರ್ಣಗೊಳಿಸಿದ್ದಾರೆ. 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು. ಕೊಹ್ಲಿ ಒಟ್ಟು 364 ಎಸೆತಗಳಲ್ಲಿ 15 ಫೋರ್ನೊಂದಿಗೆ 186 ರನ್ ಗಳಿಸಿ ಔಟಾದರು. ಕೊಹ್ಲಿಯ ಈ ಶತಕ ಬಂದಿದ್ದು ಸುದೀರ್ಘ 41 ಇನ್ನಿಂಗ್ಸ್ಗಳ ಅಂತರದಲ್ಲಿ ಎಂಬುದು ವಿಶೇಷ. 28ನೇ ಟೆಸ್ಟ್ ಶತಕಕ್ಕಾಗಿ ಬರೊಬ್ಬರಿ 41 ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಇದಕ್ಕೂ ಮೊದಲು ಕೊಹ್ಲಿ ತಮ್ಮ 12ನೇ ಶತಕಕ್ಕಾಗಿ 11 ಟೆಸ್ಟ್ ಇನ್ನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು. 7 ಮತ್ತು 26ನೇ ಶತಕ ಸಿಡಿಸಲು ತಲಾ 10 ಇನ್ನಿಂಗ್ಸ್ಗಳ ಅಂತರವಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಬೃಹತ್ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಕಾಂಗರೂ ಪಡೆ ಉಸ್ಮಾನ್ ಖವಾಜಾ ಅವರ 180 ರನ್ ಮತ್ತು ಕ್ಯಾಮೆರಾನ್ ಗ್ರೀನ್ ಅವರ 114 ರನ್ ನೆರವಿನಿಂದ 480 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ಶುಭ್ಮನ್ ಗಿಲ್ ಅವರ 128, ವಿರಾಟ್ ಕೊಹ್ಲಿ 186 ಮತ್ತು ಅಕ್ಷರ್ ಪಟೇಲ್ ಅವರ 79 ರನ್ಗಳ ನೆರವಿನಿಂದ 91 ರನ್ಗಳ ಮುನ್ನಡೆ ಪಡೆದು 571 ರನ್ಗೆ ಆಲೌಟ್ ಆಯಿತು. ಕೊನೆಯ ದಿನ ಆಸ್ಟ್ರೇಲಿಯಾ ತನ್ನ ಎಡರಡನೇ ಇನ್ನಿಂಗ್ಸ್‌ನಲ್ಲಿ 78.1 ಓವರ್ನಲ್ಲಿ 175 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:20 am, Tue, 14 March 23