ಐಸಿಸಿ ಅಂಡರ್ 19 ವಿಶ್ವಕಪ್‌ನಲ್ಲಿ (ICC Under-19 World Cup) ಭಾರತ ಅಂಡರ್ 19 ತಂಡ ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದೆ. ಫೆಬ್ರವರಿ 5 ಶನಿವಾರದಂದು ಅಂಟಿಗಾದ ಸರ್. ರಿಚರ್ಡ್ ಸ್ಟೇಡಿಯಂನಲ್ಲಿ ಬಲಿಷ್ಠ ಇಂಗ್ಲೆಂಡ್ (India U19 vs England U19) ವಿರುದ್ಧ ಅಂತಿಮ ಫೈನಲ್ ಕಾದಾಟ ನಡೆಯಲಿದೆ. ಯಶ್ ಧುಲ್ ಪಡೆಯ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದೆ. ಯಾಕಂದ್ರೆ ಈ ಬಾರಿಯ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತೀಯ ಕಿರಿಯರು ಫೈನಲ್ ವರೆಗೆ ನಡೆದು ಬಂದ ಹಾದಿ ಬಲುರೋಚಕ. ಟೂರ್ನಿ ಆರಂಭವಾದ ಕೂಡಲೆ ತಂಡದ ಆಟಗಾರರಿಗೆ ಕೊರೊನಾ ಬೆಂಬಿಡದೆ ಕಾಡಿತು. ಆದರೂ ಇದುವರೆಗೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋತಿಲ್ಲ. ಆಡಿದ 5 ಪಂದ್ಯಗಳ ಪೈಕಿ ಐದರಲ್ಲೂ ಗೆದ್ದು ಬೀಗಿತು. ಇದೀಗ ಪ್ರಶಸ್ತಿ ಎತ್ತಿ ಹಿಡಿಯಲು ಸಜ್ಜಾಗಿರುವ ಭಾರತೀಯ ಕಿರಿಯರ ತಂಡದ ಜೊತೆಗೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸಂವಾದ ನಡೆಸಿದ್ದಾರೆ.
ಹೌದು, ಮಹತ್ವದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು ಭಾರತ ಅಂಡರ್ 19 ತಂಡದ ಆಟಗಾರರ ಜೊತೆ ಮಾತನಾಡಿದ ಕೆಲವು ಟಿಪ್ಸ್ಗಳನ್ನು ನೀಡಿದ್ದಾರೆ. ಆಟಗಾರರ ಜೊತೆಗೆ ಸಂವಾದ ನಡೆಸಿದ ಸಂತಸವನ್ನು ಭಾರತೀಯ ಅಂಡರ್ 19 ತಂಡದ ಕೆಲ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಫ್ ಸ್ಪಿನ್ನರ್ ಕೌಶಲ್ ತಾಂಬೆ ಅವರು ಕೊಹ್ಲಿಯೊಂದಿಗಿನ ತಮ್ಮ ವರ್ಚುವಲ್ ಸಂವಾದದ ಸ್ಕ್ರೀನ್‌ಗ್ರ್ಯಾಬ್ ಅನ್ನು ಶೇರ್ ಮಾಡಿಕೊಂಡಿದ್ದಾಎಎ. “ಫೈನಲ್ ಪಂದ್ಯಕ್ಕೆ ಮುಂಚಿತವಾಗಿ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಮಗೆ ಕೆಲ ಅಮೂಲ್ಯವಾದ ಸಲಹೆಗಳನ್ನು ನೀಡಿದರು” ಎಂದು ಬರೆದುಕೊಂಡಿದ್ದಾರೆ.
ಅಂಡರ್ 19 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಛಾಪು ಮೂಡಿಸಿರುವ ಆಲ್ ರೌಂಡರ್ ರಾಜವರ್ಧನ್ ಹಂಗರ್ಗೇಕರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. “ಇದು ನಿಜಕ್ಕೂ ಕೂಡ ಅದ್ಭುತವಾದ ಸಂವಾದವಾಗಿತ್ತು. ಕ್ರಿಕೆಟ್ ಹಾಗೂ ಜೀವನದ ವಿಚಾರವಾಗಿ ಕೆಲ ಮಹತ್ವದ ಅಂಶಗಳನ್ನು ನಿಮ್ಮಿಂದ ಕಲಿತೆವು. ಇದು ನಮಗೆ ಮುಂದಿನ ದಿನಗಳಲ್ಲಿ ಖಂಡಿತಾ ಸಹಾಯವಾಗಲಿದೆ” ಎಂದು ಇವರು ಹೇಳಿಕೊಂಡಿದ್ದಾರೆ.
ಫೈನಲ್ ತಲುಪಲು ಗೆಲ್ಲಲೇ ಬೇಕಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅಂಡರ್ 19 ತಂಡ ಎಲ್ಲಾ ವಿಭಾಗಗಳಲ್ಲಿಯೂ ಅಮೋಘ ಆಟವನ್ನು ಪ್ರದರ್ಶಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290 ರನ್ ಕಲೆಹಾಕಿತು. ನಾಯಕ ಯಶ್ ಧುಲ್ ಹಾಗೂ ಶೇಕ್ ರಶೀದ್ ಅಮೋಘ ಆಟ ಆಸೀಸ್ ಬೌಲರ್‌ಗಳನ್ನು ಕಂಗೆಡುವಂತೆ ಮಾಡಿತು. ಇಬ್ಬರು ಭರ್ಜರಿ ದ್ವಿಶತಕದ ಜೊತೆಯಾಟ (204 ರನ್) ಆಡಿದರು. ನಾಯಕ ಯಶ್ ಧುಲ್ ಭರ್ಜರಿ ಶತಕ ದಾಖಲಿಸಿದರೆ, ರಶೀದ್ 94 ರನ್‌ಗಳಿಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಶತಕ ವಂಚಿತವಾದರು. 291 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 100 ರನ್ ಆಗುವ ಹೊತ್ತಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ತಂಡದ ಪರ ಲಚ್ಲನ್ ಶಾ 51 ರನ್ ಗಳಿಸಿದರೆ, ಕೋರೆ ಮಿಲ್ಲರ್ 38 ಮತ್ತು ಕ್ಯಾಂಪ್ಬೆಲ್ 30 ರನ್ ಗಳಿಸಿದ್ದೇ ಹೆಚ್ಚು. ಭಾರತೀಯರ ಬೌಲಿಂಗ್ ದಾಳಿಗೆ 41.5 ಓವರ್ನಲ್ಲಿ 194 ರನ್ಗೆ ಸರ್ವಪತನ ಕಂಡಿತು.
IND vs WI: ಟೀಮ್ ಇಂಡಿಯಾದಲ್ಲಿ ಕೊರೊನಾ: ಹೊಸ ಅಪ್ಡೇಟ್ ಏನು?, ಪಂದ್ಯ ನಡೆಯುತ್ತಾ, ಇಲ್ವಾ?: ಇಲ್ಲಿದೆ ಮಾಹಿತಿ