ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯ ವೇಳೆ ಟೀಮ್ ಇಂಡಿಯಾದ ತ್ರಿಮೂರ್ತಿಗಳಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿ ಮುಕ್ತಾಯದ ಬೆನ್ನಲ್ಲೇ ಆಂಗ್ಲರ ವಿರುದ್ಧದ ಟಿ20 ಹಾಗೂ ಏಕದಿನ ಸರಣಿ ಶುರುವಾಗಲಿದೆ.
ಈ ಸರಣಿಯು ಜನವರಿ 22 ರಿಂದ ಆರಂಭವಾಗಲಿದ್ದು, ಮೊದಲಿಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ಏಕದಿನ ಸರಣಿ ಶುರುವಾಗಲಿದೆ. ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಕಾರಣ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದೇ ವೇಳೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಿದ್ದಾರೆ.
ಇನ್ನು ಫೆಬ್ರವರಿ 6 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೂ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಲಿದ್ದಾರೆ. ಬುಮ್ರಾ ಅವರೊಂದಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ದೀರ್ಘ ಪ್ರವಾಸದ ಬಳಿಕ ಮೂವರ ಕಾರ್ಯಭಾರವನ್ನು ನಿರ್ವಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಈ ಬಗ್ಗೆ ಬುಮ್ರಾ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೂವರು ತ್ರಿಮೂರ್ತಿಗಳು ಕಾಣಿಸಿಕೊಳ್ಳದಿದ್ದರೂ ಅಚ್ಚರಿಪಡಬೇಕಿಲ್ಲ.
ಭಾರತ ತಂಡದ ಮೂವರು ಪ್ರಮುಖ ಆಟಗಾರರು ಹೊರಗುಳಿದರೆ ಟೀಮ್ ಇಂಡಿಯಾವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಈಗಾಗಲೇ ಉತ್ತರವಂತು ಸ್ಪಷ್ಟವಾಗಿದೆ.
ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಇದ್ದು, ಅವರೇ ಇಂಗ್ಲೆಂಡ್ ವಿರುದ್ಧದ ಚುಟುಕು ಸರಣಿಯಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಏಕದಿನ ತಂಡದ ನಾಯಕರಾಗುತ್ತಾರೆ ಎಂಬುದೇ ಕುತೂಹಲ. ಈ ಕುತೂಹಲಕ್ಕೆ ಉತ್ತರ ಉಪನಾಯಕ ಶುಭ್ಮನ್ ಗಿಲ್. ಶುಭ್ಮನ್ ಅವರನ್ನು ಈಗಾಗಲೇ ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಗಿಲ್ ಭಾರತ ತಂಡದ ಸಾರಥ್ಯವಹಿಸಿಕೊಳ್ಳಲಿದ್ದಾರೆ.
ಅದರಂತೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಶುಭ್ಮನ್ ಗಿಲ್ ಟೀಮ್ ಇಂಡಿಯಾ ಏಕದಿನ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ ಎನ್ನಬಹುದು. ಇನ್ನು ಈ ತಂಡದಲ್ಲಿ ಏಕದಿನ ವಿಶ್ವಕಪ್ ಟೀಮ್ನಲ್ಲಿದ್ದ ಅನುಭವಿ ಆಟಗಾರರಾದ ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಹಾಗೂ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಬುಮ್ರಾ ಬೂಮ್ ಬೂಮ್ಗೆ ಪಾಕ್ ವೇಗಿಯ ಸರ್ವಶ್ರೇಷ್ಠ ದಾಖಲೆ ಶೇಕಿಂಗ್..!
Published On - 7:15 am, Thu, 2 January 25