
ಅಕ್ಟೋಬರ್ 23, 2022 ರ ರಾತ್ರಿ ಭಾರತೀಯ ಕ್ರಿಕೆಟ್ನಲ್ಲಿ ಮರೆಯಲಾರದ ಕ್ಷಣಕ್ಕೆ ಸಾಕ್ಷಿಯಾಯಿತು. ಇನ್ನೇನೂ ಗೆದ್ದೇ ಬಿಟ್ಟೆವು ಎಂದು ಬೀಗುತ್ತಿದ್ದ ಪಾಕಿಗಳಿಗೆ ಸೋಲಿನ ಶಾಕ್ ನೀಡಿದ್ದ ಕಿಂಗ್ ಕೊಹ್ಲಿ ಭಾರತೀಯ ಅಭಿಮಾನಿಗಳು ಹುಚ್ಚೇದ್ದು ಕುಣಿಯುವಂತೆ ಮಾಡಿದ್ದರು. ವಾಸ್ತವವಾಗಿ ಆ ರಾತ್ರಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್‌ನ ರೋಚಕ ಪಂದ್ಯ ನಡೆದಿತ್ತು. ಪಾಕಿಸ್ತಾನ ನೀಡಿದ್ದ 160 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 31 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆದರೆ, ವಿರಾಟ್ ಕೊಹ್ಲಿ ಮಾತ್ರ ಕೊನೆಯವರೆಗೂ ಹೋರಾಟ ಬಿಡಲಿಲ್ಲ.
ಹಾರ್ದಿಕ್ ಪಾಂಡ್ಯ ಜೊತೆಗೂಡಿದ ಕೊಹ್ಲಿ ಐದನೇ ವಿಕೆಟ್‌ಗೆ 113 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಈ ಜೋಡಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿತು. ಪಂದ್ಯದ ಕೊನೆಯ ಹಂತದಲ್ಲಿ ವಿರಾಟ್ ಕೊಹ್ಲಿ ಹೊಡೆದ ಆ ಎರಡು ಸಿಕ್ಸರ್‌ಗಳು ಕ್ರಿಕೆಟ್ ಇತಿಹಾಸದಲ್ಲೇ ಮರೆಯಲಾಗದ ಹೊಡೆತಗಳಾಗಿ ಉಳಿದಿವೆ.
ಪಂದ್ಯ ರೋಚಕ ಘಟ್ಟ ತಲುಪಿತ್ತು. ಭಾರತದ ಗೆಲುವಿಗೆ ಕೊನೆಯ ಎಂಟು ಎಸೆತಗಳಲ್ಲಿ 28 ರನ್‌ಗಳ ಅಗತ್ಯವಿತ್ತು. ಈ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಬೌಲಿಂಗ್‌ಗೆ ಬಂದರು. ಎದುರಿಗೆ ಇದ್ದದ್ದು, ರನ್ ಚೇಸಿಂಗ್ ಸಾಮ್ರಾಟ ವಿರಾಟ್ ಕೊಹ್ಲಿ. ರೌಫ್ ಎಸೆದ 19ನೇ ಓವರ್‌ನ ಐದನೇ ಎಸೆತವನ್ನು ಬ್ಯಾಕ್‌ಫುಟ್‌ನಲ್ಲಿ ಆಡಿದ ಕೊಹ್ಲಿ ನೇರವಾಗಿ ಸಿಕ್ಸರ್‌ಗೆ ಅಟ್ಟಿದರು. ಮುಂದಿನ ಎಸೆತದಲ್ಲೇ ಫೈನ್ ಲೆಗ್ ಮೇಲಿಂದ ಮತ್ತೊಂದು ಸಿಕ್ಸರ್ ಸಿಡಿಸಿದರು. ಸತತ ಎರಡು ಎಸೆತಗಳಲ್ಲಿ 12 ರನ್‌ಗಳು ಹರಿದುಬಂದವು. ಇದರಿಂದ ಪಂದ್ಯದ ಚಿತ್ರಣವೇ ಬದಲಾಯಿತು. ಮೈದಾನದಲ್ಲಿದ್ದ ಸಾವಿರಾರು ಅಭಿಮಾನಿಗಳು ಸಂಭ್ರಮದಲ್ಲಿ ಮುಳುಗಿದರೆ, ಟಿವಿ ಮುಂದೆ ಕುಳಿತಿದ್ದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ರೋಮಾಂಚನಗೊಂಡರು.
ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಮೊಹಮ್ಮದ್ ನವಾಜ್ ಬೌಲಿಂಗ್‌ಗೆ ಬಂದರು. ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಔಟಾದರು. ನಂತರದ ಎರಡು ಎಸೆತಗಳಲ್ಲಿ ಭಾರತ ಮೂರು ರನ್ ಗಳಿಸಿತು. ನಾಲ್ಕನೇ ಎಸೆತ ನೋ-ಬಾಲ್ ಆಗಿತ್ತು. ಕೊಹ್ಲಿ ಆ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಫ್ರೀ-ಹಿಟ್ ಎಸೆತದಲ್ಲಿ ಕೊಹ್ಲಿ ಬೌಲ್ಡ್ ಆದರೂ, ಚೆಂಡು ಸ್ಟಂಪ್‌ಗೆ ತಾಗಿ ದೂರ ಹೋಯಿತು. ಇದರ ಲಾಭ ಪಡೆದ ಭಾರತೀಯ ಬ್ಯಾಟರ್‌ಗಳು ಮೂರು ರನ್ ಓಡಿದರು.
ಐದನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ ಔಟಾದರು. ಭಾರತಕ್ಕೆ ಗೆಲ್ಲಲು ಎರಡು ರನ್‌ಗಳು ಬೇಕಿದ್ದವು. ಕೊನೆಯ ಎಸೆತ ಎದುರಿಸಲು ರವಿಚಂದ್ರನ್ ಅಶ್ವಿನ್ ಕ್ರೀಸ್‌ಗೆ ಬಂದರು. ನವಾಜ್ ಎಸೆದ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಹೋದ ಕಾರಣ ಅಂಪೈರ್ ವೈಡ್ ನೀಡಿದರು. ಇದರೊಂದಿಗೆ ಪಂದ್ಯ ಟೈ ಆಯಿತು. ಗೆಲುವಿಗೆ ಕೇವಲ ಒಂದು ರನ್ ಬೇಕಿದ್ದಾಗ, ಅಶ್ವಿನ್ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದರು. ಕೊನೆಯ ಎಸೆತವನ್ನು ಫೀಲ್ಡರ್‌ಗಳ ಮೇಲಿಂದ ಹೊಡೆದು ಭಾರತಕ್ಕೆ ನಾಲ್ಕು ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು.
‘ಅಹಂಕಾರಿ ಮತ್ತು ಗರ್ವಿಷ್ಠ’; ಕೊಹ್ಲಿಯ ಬಗ್ಗೆ ಡಿವಿಲಿಯರ್ಸ್ ಅಚ್ಚರಿಯ ಹೇಳಿಕೆ..!
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಅಸಾಧ್ಯವೆನಿಸಿದ್ದ ಪಂದ್ಯವನ್ನು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಭಾರತದ ಪರವಾಗಿ ತಿರುಗಿಸಿದ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
Published On - 5:46 pm, Fri, 23 October 26