
ಜನವರಿ 30 ರಂದು ಪ್ರಾರಂಭವಾಗಲಿರುವ ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕಾಗಿ ದೆಹಲಿ ತಂಡವನ್ನು ಪ್ರಕಟಿಸಲಾಗಿದೆ. 20 ಸದಸ್ಯರ ಈ ತಂಡದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ 12 ವರ್ಷಗಳ ಬಳಿಕ ಕಿಂಗ್ ಕೊಹ್ಲಿ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವುದು ಖಚಿತವಾಗಿದೆ.
ವಿಶೇಷ ಎಂದರೆ ವಿರಾಟ್ ಕೊಹ್ಲಿ ಒಳಗೊಂಡಿರುವ ಈ ತಂಡವನ್ನು ಮುನ್ನಡೆಸುತ್ತಿರುವುದು 25 ವರ್ಷದ ಆಯುಷ್ ಬದೋನಿ. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದ ಆಯುಷ್ ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದು, ಹೀಗಾಗಿ ರಣಜಿ ಟೂರ್ನಿಯಲ್ಲೂ ನಾಯಕನ್ನಾಗಿ ಮುಂದುವರೆಸಲಾಗಿದೆ. ಅದರಂತೆ ವಿರಾಟ್ ಕೊಹ್ಲಿ ಆಯುಷ್ ಬದೋನಿ ಅವರ ನಾಯಕತ್ವದಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
ವಿರಾಟ್ ಕೊಹ್ಲಿ ದೆಹಲಿ ಪರ ಕೊನೆಯ ಬಾರಿ ರಣಜಿ ಪಂದ್ಯವಾಡಿದ್ದು 2012 ರಲ್ಲಿ. ಉತ್ತರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಮೊದಲ ಇನಿಂಗ್ಸ್ನಲ್ಲಿ 14 ಮತ್ತು ದ್ವಿತೀಯ ಇನಿಂಗ್ಸ್ನಲ್ಲಿ 43 ರನ್ ಬಾರಿಸಿದ್ದರು.
ವಿಶೇಷ ಎಂದರೆ ಅಂದು ದೆಹಲಿ ತಂಡವನ್ನು ಮುನ್ನಡೆಸಿದ್ದು ವೀರೇಂದ್ರ ಸೆಹ್ವಾಗ್. ಹಾಗೆಯೇ ಆರಂಭಿಕನಾಗಿ ಕಾಣಿಸಿಕೊಂಡಿದ್ದು ಪ್ರಸ್ತುತ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್.
ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಖಾಯಂ ಸದಸ್ಯರಾದ ಕೊಹ್ಲಿ ಮತ್ತೆ ದೇಶೀಯ ಟೂರ್ನಿಯತ್ತ ಮುಖ ಮಾಡಿರಲಿಲ್ಲ. ಇದೀಗ 12 ವರ್ಷಗಳ ಬಳಿಕ ಕಿಂಗ್ ಕೊಹ್ಲಿ ಮತ್ತೆ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ರೈಲ್ವೇಸ್ ವಿರುದ್ಧದ ಪಂದ್ಯದಿಂದ ದೆಹಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊರಗುಳಿದಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪಂತ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಚಾಂಪಿಯನ್ಸ್ ಟ್ರೋಫಿಗಾಗಿ ಸಿದ್ಧತೆ. ಹೀಗಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿರುವ ಪಂದ್ಯದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್
ದೆಹಲಿ ರಣಜಿ ತಂಡ: ಆಯುಷ್ ಬದೋನಿ (ನಾಯಕ), ವಿರಾಟ್ ಕೊಹ್ಲಿ, ಪ್ರಣವ್ ರಾಜವಂಶಿ (ವಿಕೆಟ್ ಕೀಪರ್), ಸನತ್ ಸಾಂಗ್ವಾನ್, ಅರ್ಪಿತ್ ರಾಣಾ, ಮಯಾಂಕ್ ಗುಸೇನ್, ಶಿವಂ ಶರ್ಮಾ, ಸುಮಿತ್ ಮಾಥುರ್, ವಂಶ್ ಬೇಡಿ (ವಿಕೆಟ್ ಕೀಪರ್), ಮನಿ ಗ್ರೆವಾಲ್, ಹರ್ಷ್ ತ್ಯಾಗಿ, ಸಿದ್ಧಾಂತ್ ಶರ್ಮಾ, ನವದೀಪ್ ಸೈನಿ , ಯಶ್ ಧುಲ್, ಗಗನ್ ವತ್ಸ್, ಜಾಂಟಿ ಸಿಧು, ಹಿಮ್ಮತ್ ಸಿಂಗ್, ವೈಭವ್ ಕಂಡ್ಪಾಲ್, ರಾಹುಲ್ ಗೆಹ್ಲೋಟ್, ಜಿತೇಶ್ ಸಿಂಗ್.