
ಟೀಮ್ ಇಂಡಿಯಾ ಆಟಗಾರರ ಜೊತೆಗಿನ 2026ರ ಕೇಂದ್ರ ಒಪ್ಪಂದಕ್ಕೆ ಬಿಸಿಸಿಐ ಸಿದ್ಧತೆಗಳನ್ನು ಶುರು ಮಾಡಿದೆ. ಈ ಬಾರಿಯ ಒಪ್ಪಂದದಲ್ಲಿ ಕೆಲ ಮಹತ್ವದ ಬದಲಾವಣೆ ಕಂಡು ಬರಲಿದೆ. ಈ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಹಿಂಬಡ್ತಿ ನೀಡುವ ಸಾಧ್ಯತೆಯಿದೆ.
ಪ್ರಸ್ತುತ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ A+ ಗ್ರೇಡ್ನಲ್ಲಿದ್ದಾರೆ. ಅದರಂತೆ ಈ ನಾಲ್ವರು ಆಟಗಾರರು ವಾರ್ಷಿಕವಾಗಿ ತಲಾ 7 ಕೋಟಿ ರೂ. ಪಡೆಯುತ್ತಿದ್ದಾರೆ.
ಆದರೆ ಇದೀಗ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಈ ಮೂವರನ್ನು ಎ ಪ್ಲಸ್ ಶ್ರೇಣಿಯಿಂದ ಕೈ ಬಿಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.
ಅಲ್ಲದೆ ಹೊಸ ಒಪ್ಪಂದದಲ್ಲಿ ಈ ಮೂವರನ್ನು ಎ ಗ್ರೇಡ್‌ಗೆ ಸೇರಿಸುತ್ತಾರೋ ಅಥವಾ ಬಿ ಗ್ರೇಡ್‌ಗೆ ಪರಿಗಣಿಸುತ್ತಾರೋ ಎಂಬುದೇ ಈಗ ಕುತೂಹಲ. ಏಕೆಂದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯುತ್ತಿದ್ದು, ಹೀಗಾಗಿ ಇಬ್ಬರಿಗೂ ಹಿಂಬಡ್ತಿ ನೀಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.
ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ ಒಟ್ಟು 6 ಆಟಗಾರರು ಎ ಗ್ರೇಡ್ನಲ್ಲಿದ್ದಾರೆ. ಅವರೆಂದರೆ ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ. ಈ ದರ್ಜೆಯ ಆಟಗಾರರು ಬಿಸಿಸಿಐನಿಂದ ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಗ್ರೇಡ್-ಎ ಯಿಂದ ಮೊಹಮ್ಮದ್ ಶಮಿ ಅವರನ್ನು ಸಹ ಕೈ ಬಿಡುವ ಸಾಧ್ಯತೆಯಿದೆ.
ಅದೇ ರೀತಿ, ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ, ಗ್ರೇಡ್ ಬಿ ನಲ್ಲಿ 5 ಆಟಗಾರರು ಮತ್ತು ಗ್ರೇಡ್ ಸಿ ನಲ್ಲಿ ಒಟ್ಟು 19 ಆಟಗಾರರಿದ್ದಾರೆ. ಈ ಎರಡೂ ದರ್ಜೆಗಳಲ್ಲಿರುವ ಆಟಗಾರರ ಒಪ್ಪಂದಗಳಲ್ಲೂ ಮಹತ್ವದ ಬದಲಾವಣೆಯಾಗುವ ನಿರೀಕ್ಷೆಯಿದೆ.
ಅಂದರೆ ಇಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರನ್ನು A+ ಗ್ರೇಡ್ ಒಪ್ಪಂದದಿಂದ ಹೊರಗಿಟ್ಟರೆ, ಉಳಿಯುವುದು ಜಸ್ಪ್ರೀತ್ ಬುಮ್ರಾ. ಈ ಪಟ್ಟಿಗೆ ಮೂರು ಸ್ವರೂಪಗಳಲ್ಲೂ ಕಣಕ್ಕಿಳಿಯುತ್ತಿರುವ ಆಟಗಾರರನ್ನು ಸೇರ್ಪಡೆಗೊಳಿಸಲಿದ್ದಾರಾ ಅಥವಾ ಗ್ರೇಡ್ನಲ್ಲಿ ಬದಲಾವಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಬರೋಬ್ಬರಿ ೩೭ ಸಿಕ್ಸ್… ಫಿನ್ ಅಲೆನ್ ಆರ್ಭಟ