
ಟಿ20 ಸರಣಿಯಲ್ಲಿ ಆಸೀಸ್ ಹಾಗೂ ಹರಿಣಗಳನ್ನು ಮಣಿಸಿ, ರೋಹಿತ್ ನೇತೃತ್ವದ ಟೀಂ ಇಂಡಿಯಾ ಟಿ20 ವಿಶ್ವಕಪ್ಗಾಗಿ (T20 World Cup 2022) ಗುರುವಾರ ಬೆಳಗ್ಗೆ ಆಸ್ಟ್ರೇಲಿಯಾಕ್ಕೆ ತೆರಳಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಸೇರಿದಂತೆ ಎಲ್ಲಾ ಆಟಗಾರರು ಆಸ್ಟ್ರೇಲಿಯಾಕ್ಕೆ ಹಾರಿದ ಫೋಟೋಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಆರಂಭಿಕ ರೋಹಿತ್ ಶರ್ಮಾ ನಾಯಕತ್ವದ ಈ ತಂಡದ ಮೇಲೆ ಭಾರೀ ನಿರೀಕ್ಷೆಗಳಿವೆ. ಭಾರತ ಕೊನೆಯದಾಗಿ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. 15 ವರ್ಷಗಳ ಬರ ನೀಗಿಸುವ ಗುರಿಯೊಂದಿಗೆ ಟೀಂ ಇಂಡಿಯಾ ಇದೀಗ ಆಸ್ಟ್ರೇಲಿಯಾಕ್ಕೆ ತೆರಳಿದೆ. ಆದರೆ ಅದಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಕಿಂಗ್ ಕೊಹ್ಲಿ ಹಂಚಿಕೊಂಡ ಒಂದೇ ಒಂದು ಫೋಟೋ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ಕೊಹ್ಲಿ ಹಂಚಿಕೊಂಡ ಫೋಟೋದಲ್ಲೇನಿದೆ?
ಇದೇ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾಕ್ಕೆ ತೆರಳುವ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಸಹ ಆಟಗಾರರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರೊಂದಿಗೆ ಯುಜ್ವೇಂದ್ರ ಚಹಾಲ್ ಮತ್ತು ವೇಗಿ ಹರ್ಷಲ್ ಪಟೇಲ್ ಕೂಡ ಇದ್ದಾರೆ. ಆಸ್ಟ್ರೇಲಿಯಾಕ್ಕೆ ಹೊರಡುತ್ತಿದ್ದೇನೆ ಎಂದು ಫೋಟೋಗೆ ಶೀರ್ಷಿಕೆ ನೀಡಿರುವ ಕೊಹ್ಲಿ, ಮುಂಬರುವ ದಿನಗಳು ಅದ್ಭುತವಾಗಿರುತ್ತವೆ ಎಂದು ಬರೆದುಕೊಂಡಿದ್ದಾರೆ.
ಎಲ್ಲರ ಕಣ್ಣು ವಿರಾಟ್ ವಾಚ್ ಮೇಲೆ..
ಈ ಫೋಟೋದಲ್ಲಿ ವಿರಾಟ್ ಕೊಹ್ಲಿ ತುಂಬಾ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೊಹ್ಲಿ ಧರಿಸಿರುವ ದುಬಾರಿ ವಾಚ್ ಕಂಡ ಅನೇಕ ಅಭಿಮಾನಿಗಳು ಇದರ ಬೆಲೆ ತಿಳಿಯಲು ಗೂಗಲ್ ಮೊರೆಹೊಗಿದ್ದಾರೆ. ಅಷ್ಟಕ್ಕೂ ಕೊಹ್ಲಿ ಧರಿಸಿದ್ದ ಈ ವಾಚ್ ರೋಲೆಕ್ಸ್ ಕಂಪನಿಗೆ ಸೇರಿದ್ದಾಗಿದ್ದು, ರೋಲೆಕ್ಸ್ ವೆಬ್‌ಸೈಟ್‌ನಲ್ಲಿ ಈ ಮಾಡೆಲ್ ಡೇಟನ್ ಬೆಲೆ ಸುಮಾರು 28 ಲಕ್ಷ ರೂ. ಆಗಿದೆ. ಅಷ್ಟೇ ಅಲ್ಲ, ಈ ಮಾದರಿಯ ವಾಚನ್ನು ನಮಗೆ ಹೇಗೆ ಬೇಕೋ ಹಾಗೆ ತಯಾರಿಸಿಕೊಡಲಾಗುತ್ತದೆ. ಅದರಂತೆ ವಿರಾಟ್ ಧರಿಸಿರುವ ಮಾಡೆಲ್ ಚಿನ್ನ ಲೇಪಿತವಾಗಿರುವುದರಿಂದ ಇದರ ಬೆಲೆಯೂ ಅತ್ಯಂತ ದುಬಾರಿಯಾಗಿದೆ. ಮೊದಲಿನಿಂದಲೂ ವಿರಾಟ್ಗೆ ದುಬಾರಿ ವಾಚ್ಗಳೆಂದರೆ ತುಂಬಾ ಇಷ್ಟ. ಅಲ್ಲದೆ ದುಬಾರಿ ಕಾರುಗಳ ಕ್ರೇಜ್ ಕೂಡ ಕೊಹ್ಲಿಗಿದ್ದು, ಅವರ ಬಳಿ ಹಲವು ಅತ್ಯಂತ ದುಬಾರಿ ಕಾರುಗಳೂ ಇವೆ.
ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ
ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಕ್ಕೂ ಮೊದಲು ತಂಡವು ಪರ್ತ್‌ನಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದೆ. ಈ ಕುರಿತು ಮಾತನಾಡಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಟೂರ್ನಿಗೂ ಮುನ್ನ ಆಸ್ಟ್ರೇಲಿಯಕ್ಕೆ ಹೋಗುತ್ತಿರುವುದು ಅಲ್ಲಿಯ ಪರಿಸ್ಥಿತಿಗಳಿಗೆ, ಅದರಲ್ಲೂ ವಿಶೇಷವಾಗಿ ಆ ದೇಶದಲ್ಲಿ ಪಂದ್ಯ ಆಡದ ಕ್ರಿಕೆಟಿಗರನ್ನು ಒಗ್ಗಿಸಲು ಸಹಾಯಕವಾಗಲಿದೆ ಎಂದಿದ್ದಾರೆ. ಐಸಿಸಿ ಆಯೋಜಿಸುವ ಅಭ್ಯಾಸ ಪಂದ್ಯಗಳಿಗಾಗಿ ತಂಡವು ಬ್ರಿಸ್ಬೇನ್‌ಗೆ ತೆರಳುವ ಮೊದಲು ಪರ್ತ್‌ನಲ್ಲಿ ಕೆಲವು ಪಂದ್ಯಗಳನ್ನು ಆಡಲಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.
ಮೀಸಲು ಪಡೆ: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.