T20 World Cup: 7 ಸೀಸನ್ಸ್, 6 ಚಾಂಪಿಯನ್ ತಂಡಗಳು; ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವವರು ಯಾರು?
T20 World Cup: ಈ ಬಾರಿಯ ಟಿ20 ವಿಶ್ವಕಪ್ಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದ್ದು, ವಿಶ್ವಕಪ್‌ನ 8ನೇ ಸೀಸನ್ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದೆ. ಮಿನಿ ಸಮರ ಅರ್ಹತಾ ಪಂದ್ಯಗಳೊಂದಿಗೆ ಆರಂಭವಾಗಲಿದ್ದರೆ, ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ನಡೆಯಲಿವೆ.

ಈ ಬಾರಿಯ ಟಿ20 ವಿಶ್ವಕಪ್ಗೆ (T20 World Cup 2022) ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದ್ದು, ವಿಶ್ವಕಪ್‌ನ 8ನೇ ಸೀಸನ್ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದೆ. ಮಿನಿ ಸಮರ ಅರ್ಹತಾ ಪಂದ್ಯಗಳೊಂದಿಗೆ ಆರಂಭವಾಗಲಿದ್ದರೆ, ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ನಡೆಯಲಿವೆ. ಮೊದಲ ಬಾರಿಗೆ ಟಿ20 ವಿಶ್ವಕಪ್ 2007 ರಲ್ಲಿ ಪ್ರಾರಂಭವಾಯಿತು. ಮೊದಲ ಸೀಸನ್ನೇ ತುಂಬಾ ರೋಚಕವಾಗಿದ್ದು, ಮಹೇಂದ್ರ ಸಿಂಗ್ ಧೋನಿ (Mahendra Singh Dhon) ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಚಾಂಪಿಯನ್ ಆಗಿತ್ತು. ಚುಟಕು ಮಾದರಿಯ ವಿಶ್ವಕಪ್‌ನಲ್ಲಿ ಇದುವರೆಗೆ 7 ಸೀಸನ್‌ಗಳು ನಡೆದಿದ್ದು, ಅದರಲ್ಲಿ 6 ತಂಡಗಳು ಮಾತ್ರ ಪ್ರಶಸ್ತಿ ಗೆದ್ದಿವೆ.
ಎರಡು ಬಾರಿ ಟ್ರೋಫಿ ಗೆದ್ದ ವೆಸ್ಟ್ ಇಂಡೀಸ್..
ಇದುವರೆಗೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ವೆಸ್ಟ್ ಇಂಡೀಸ್. 2012ರಲ್ಲಿ ಮೊದಲ ಪ್ರಶಸ್ತಿ ಹಾಗೂ 2016ರಲ್ಲಿ ಎರಡನೇ ಪ್ರಶಸ್ತಿ ಜಯಿಸುವಲ್ಲಿ ಕೆರಿಬಿಯನ್ ತಂಡ ಯಶಸ್ವಿಯಾಗಿತ್ತು. ಇದಲ್ಲದೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ಆಸ್ಟ್ರೇಲಿಯಾ ತಂಡಗಳು ಒಮ್ಮೆ ಪ್ರಶಸ್ತಿ ಗೆದ್ದಿವೆ. ಕಳೆದ ಬಾರಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಾಂಗರೂಗಳು ತಮ್ಮದೇ ನೆಲದಲ್ಲಿ ಕಣಕ್ಕಿಳಿಯಲಿವೆ.
ವಿಶ್ವಕಪ್ ವಿಜೇತ ತಂಡಗಳ ವಿವರ ಹೀಗಿದೆ
2007, ಮೊದಲ ಸೀಸನ್: T20 ವಿಶ್ವಕಪ್‌ನ ಮೊದಲ ಸೀಸನ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಆಗ ಭಾರತದ ಯುವ ತಂಡವನ್ನು ‘ಅಂಡರ್‌ಡಾಗ್’ ಎಂದು ಪರಿಗಣಿಸಲಾಗಿತ್ತು. ಆದರೆ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಆವೃತ್ತಿಯಲ್ಲೇ ಇತಿಹಾಸ ಸೃಷ್ಟಿಸಿತ್ತು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5 ರನ್‌ಗಳಿಂದ ಸೋಲಿಸಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂದು ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು.
2009, ಎರಡನೇ ಸೀಸನ್: T20 ವಿಶ್ವಕಪ್‌ನ ಎರಡನೇ ಸೀಸನ್ ಇಂಗ್ಲೆಂಡ್ನಲ್ಲಿ ಆಯೋಜನೆಗೊಂಡಿತ್ತು. ಮೊದಲ ಸೀಸನ್ನಲ್ಲಿ ರನ್ನರ್ ಅಪ್ ಆಗಿದ್ದ ಪಾಕಿಸ್ತಾನ ಈ ಬಾರಿ ಪ್ರಶಸ್ತಿ ಗೆದ್ದಿತ್ತು. ಲಂಡನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 8 ವಿಕೆಟ್‌ಗಳ ಜಯ ಸಾಧಿಸಿ, ಚುಟುಕು ವಿಶ್ವಕಪ್‌ನ 2ನೇ ಚಾಂಪಿಯನ್ ಆಯಿತು. ಈ ಬಾರಿಯೂ ಕೂಡ 12 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.
2010, ಮೂರನೇ ಸೀಸನ್: T20 ವಿಶ್ವಕಪ್‌ನ ಮೂರನೇ ಸೀಸನ್ ವೆಸ್ಟ್ ಇಂಡೀಸ್‌ನಲ್ಲಿ ನಡೆದಿತ್ತು. ಕ್ರಿಕೆಟ್ ಪಿತಾಮಹ ಎಂದೇ ಪರಿಗಣಿತವಾಗಿರುವ ಆಂಗ್ಲರ ತಂಡ ಈ ಬಾರಿ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದು ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಗೆದ್ದ ಮೊದಲ ವಿಶ್ವಕಪ್ ಪ್ರಶಸ್ತಿಯಾಗಿತ್ತು. ಕಿಂಗ್‌ಸ್ಟನ್ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು.
2012, ನಾಲ್ಕನೇ ಸೀಸನ್: ನಾಲ್ಕನೇ ಸೀಸನ್ನಲ್ಲಿ ಶ್ರೀಲಂಕಾ T20 ವಿಶ್ವಕಪ್ ಆತಿಥ್ಯವಹಿಸಿತ್ತು. ಈ ಬಾರಿ ವೆಸ್ಟ್ ಇಂಡೀಸ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಕೊಲಂಬೊದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕೆರಿಬಿಯನ್ ತಂಡ ಆತಿಥೇಯ ಶ್ರೀಲಂಕಾವನ್ನು 36 ರನ್‌ಗಳಿಂದ ಸೋಲಿಸಿತು.
2014, ಐದನೇ ಸೀಸನ್: ಈ ಬಾರಿ ಬಾಂಗ್ಲಾದೇಶ ಟಿ20 ವಿಶ್ವಕಪ್‌ನ 5 ನೇ ಸೀಸನ್ ಆತಿಥ್ಯ ವಹಿಸಿತ್ತು. ಈ ಬಾರಿ ಏಷ್ಯಾದ ಪಿಚ್‌ಗಳ ಲಾಭ ಪಡೆದಿದ್ದ ಶ್ರೀಲಂಕಾ ಮತ್ತು ಭಾರತ ಫೈನಲ್ಗೇರಿದ್ದವು. ಇವರಿಬ್ಬರ ನಡುವೆ ಢಾಕಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್‌ಗಳ ಜಯ ಸಾಧಿಸಿ, ಕಪ್ ಎತ್ತಿಹಿಡಿದಿತ್ತು.
2016, ಆರನೇ ಸೀಸನ್: ಈ ಬಾರಿಯ T20 ವಿಶ್ವಕಪ್ ಭಾರತದಲ್ಲಿ ನಡೆದಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡವು ಪ್ರಶಸ್ತಿ ಗೆಲ್ಲಬಹುದು ಎಂದು ಭಾವಿಸಿದ್ದರೂ ಅದು ಕೈಗೂಡಲಿಲ್ಲ. ಈ ಬಾರಿ ವೆಸ್ಟ್ ಇಂಡೀಸ್ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕೋಲ್ಕತ್ತಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 4 ವಿಕೆಟ್‌ಗಳ ಜಯ ಸಾಧಿಸಿತ್ತು.
2021, 7 ನೇ ಸೀಸನ್: ಐದು ವರ್ಷಗಳ ಸುದೀರ್ಘ ಅಂತರದ ನಂತರ ನಡೆದ T20 ವಿಶ್ವಕಪ್‌ನ 7 ನೇ ಸೀಸನ್ನನ್ನು ಶ್ರೀಲಂಕಾ ಯುಎಇಯಲ್ಲಿ ಆಯೋಜಿಸಿತ್ತು. ಕೊರೊನಾ ಸೋಂಕಿನ ದಾಳಿ ತೀವ್ರವಾಗಿದ್ದಾಗ ನಡೆದ ಈ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿತ್ತು. ದುಬೈನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್‌ಗಳ ಜಯ ಸಾಧಿಸಿತ್ತು.
2022, ಎಂಟನೇ ಸೀಸನ್: ಈ ಬಾರಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಇಂತಹ ಸಂದರ್ಭಗಳಲ್ಲಿ ಅಭಿಮಾನಿಗಳ ಕಣ್ಣು ಈ ಬಾರಿ ಕಠಿಣ ಸ್ಪರ್ಧಿಗಳೆಂದು ಪರಿಗಣಿಸಲ್ಪಟ್ಟಿರುವ ಆತಿಥೇಯ ಆಸ್ಟ್ರೇಲಿಯಾ ಮತ್ತು ಭಾರತದ ಮೇಲಿರುತ್ತದೆ. ಆದರೆ ಹೊಸ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುತ್ತದೆಯೇ ಅಥವಾ ಹಳೆಯ ಚಾಂಪಿಯನ್ನರ ಇತಿಹಾಸವನ್ನು ಪುನರಾವರ್ತಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
