Jemimah Rodrigues: ಪಾಕ್ ಬೌಲರ್​ಗಳ ಬೆಂಡೆತ್ತಿದ ಜೆಮಿಯಾ ಆಟಕ್ಕೆ ಕೊಹ್ಲಿ, ಸಚಿನ್ ಫಿದಾ: ಏನಂದ್ರು ನೋಡಿ

|

Updated on: Feb 13, 2023 | 7:51 AM

India Women vs Pakistan Women: ಟಿ20 ಮಹಿಳಾ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡ ಭರ್ಜರಿ ಗೆಲುವು ಸಾಧಿಸಿದೆ. ತಂಡದ ಜಯಕ್ಕೆ ಕಾರಣವಾದ ಜೆಮಿಯಾ ರೋಡ್ರಿಗಸ್ ಆಟಕ್ಕೆ ಭಾರತೀಯ ಅಭಿಮಾನಿಗಳು ಮಾತ್ರವಲ್ಲದೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಕೂಡ ಫಿದಾ ಆಗಿದ್ದಾರೆ.

Jemimah Rodrigues: ಪಾಕ್ ಬೌಲರ್​ಗಳ ಬೆಂಡೆತ್ತಿದ ಜೆಮಿಯಾ ಆಟಕ್ಕೆ ಕೊಹ್ಲಿ, ಸಚಿನ್ ಫಿದಾ: ಏನಂದ್ರು ನೋಡಿ
Jemimah Rodrigues
Follow us on

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ರಲ್ಲಿ (Womens T20 World Cup) ಹರ್ಮನ್​ಪ್ರೀತ್ ಕೌರ್ ನಾಯತ್ವದ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಕೇಪ್​ಟೌನ್​ನ ನ್ಯೂಲೆಂಡ್ಸ್​ನಲ್ಲಿ ನಡೆದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ (India Women vs Pakistan Women) ಮಹಿಳೆಯರು 7 ವಿಕೆಟ್​ಗಳಿಂದ ಗೆದ್ದು ಬೀಗಿದರು. ಜೆಮಿಯಾ ರೋಡ್ರಿಗಸ್ (Jemimah Rodrigues) ಅವರ ಆಕರ್ಷಕ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಮ್ಯಾಚ್ ವಿನ್ನಿಂಗ್ ಆಟವಾಡಿದ ಇವರು ಕೇವಲ 38 ಎಸೆತಗಳಲ್ಲಿ ಅಜೇಯ 53 ರನ್ ಸಿಡಿಸಿದರು. ಜೆಮಿಯಾ ಆಟಕ್ಕೆ ಭಾರತೀಯ ಅಭಿಮಾನಿಗಳು ಮಾತ್ರವಲ್ಲದೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ಸ್ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಕೂಡ ಫಿದಾ ಆಗಿದ್ದಾರೆ.

ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಅನೇಕರು ಟ್ವೀಟ್ ಮಾಡಿ ಗೆಲುವಿಗೆ ಶುಭಕೋರಿದ್ದಾರೆ. ”ಹೈವೋಲ್ಟೇಜ್ ಪಂದ್ಯದಲ್ಲಿ, ಕಠಿಣ ಟಾರ್ಗೆಟ್ ಬೆನ್ನಟ್ಟಿ ನಮ್ಮ ಮಹಿಳೆಯರು ಅದ್ಭುತ ಪ್ರದರ್ಶನ ತೋರಿದ್ದಾರೆ. ಇದು ಮುಂದಿನ ಪೀಳಿಗೆಯ ಮಹಿಳೆಯರನ್ನು ಕ್ರೀಡೆಗೆ ಪ್ರೋತ್ಸಾಹಿಸುತ್ತದೆ. ನಿಮಗೆ ಇನ್ನಷ್ಟು ಶಕ್ತಿ ಬರಲಿ, ಒಳ್ಳೆಯದಾಗಲಿ,” ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
SA20 Final: ಎಸ್​ಎ20 ಲೀಗ್​ನಲ್ಲಿ ಸನ್​ರೈಸರ್ಸ್ ತಂಡ​ ಚಾಂಪಿಯನ್ಸ್
INDW vs PAKW: ಪಾಕ್​ನ ಬಗ್ಗು ಬಡಿದು ಶುಭಾರಂಭ ಮಾಡಿದ ಟೀಮ್ ಇಂಡಿಯಾ
KL Rahul: ಕೆಎಲ್ ರಾಹುಲ್​ಗೆ ಇನ್ನೊಂದು ಚಾನ್ಸ್ ನೀಡಬೇಕೆಂದ ಮಾಜಿ ಕ್ರಿಕೆಟಿಗ
IND vs AUS 2nd Test: ತಂಡದಿಂದ ಸ್ಟಾರ್ ಆಟಗಾರನನ್ನು ಕೈಬಿಟ್ಟ ಟೀಮ್ ಇಂಡಿಯಾ

 

ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟ್: ಇದು ಮಣಿಕಟ್ಟಿನ ಮ್ಯಾಜಿಷೀಯನ್ ಜಿ. ವಿಶ್ವನಾಥ್ ಕಥೆ

ಸಚಿನ್ ತೆಂಂಡೂಲ್ಕರ್ ಟ್ವೀಟ್ ಮಾಡಿ, ”ಭಾರತ ಮಹಿಳಾ ತಂಡದ ಪಂದ್ಯವನ್ನು ಅಂಜಲಿ ಮತ್ತು ಅರ್ಜುನ್ ಜೊತೆ ವೀಕ್ಷಿಸಿ ಸಂಭ್ರಮಿಸಿದೆ. ಶಫಾಲಿ ವರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಜೆಮಿಯಾ ತನ್ನ ಇನ್ನಿಂಗ್ಸ್ ಅನ್ನು ಉತ್ತಮವಾಗಿ ಆಡಿದರು. ರಿಚ್ಚಾ ಘೋಷ್ ಕೂಡ ಅತ್ಯುತ್ತಮ ಸಾಥ್ ನೀಡಿದರು,” ಎಂದು ಹೇಳಿದ್ದಾರೆ.

 

ಇನ್ನೂ ಅನೇಕರು ಟ್ವೀಟ್ ಮಾಡಿ ಜೆಮಿಯಾ ಆಟವನ್ನು ಹೊಗಳಿದ್ದಾರೆ. ”ಜೆಮಿಯಾ ಜೆಸ್ಸಿಕಾ ರೋಡ್ರಿಗಸ್ ಈ ಹೆಸರನ್ನು ನೆನಪಿನಲ್ಲಿ ಇಡಿ,” ಎಂದು ಒಬ್ಬರು ಬರೆದುಕೊಂಡಿದ್ದಾರೆ. ಜೆಮಿಯಾರಿಂದ ಅತ್ಯುತ್ತಮ ಅರ್ಧಶತಕ ಬಂದಿದೆ. ಅವರ ಒಂದೊಂದು ಹೊಡೆತ ಅದ್ಭುತವಾಗಿತ್ತು, ಜೆಮಿಯಾ ಅವರ ಬ್ಯಾಟ್​ನಿಂದ ಇಂಥಹ ಆಟವನ್ನು ವೀಕ್ಷಿಸಲು ಖುಷಿ ಆಗುತ್ತದೆ. ಹೀಗೆ ಅನೇಕರು ಟ್ವೀಟ್ ಮಾಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಜವೆರಿಯಾ ಖಾನ್ (8) ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 42 ಆಗುವ ಹೊತ್ತಿಗೆ 12 ರನ್ ಗಳಿಸಿದ್ದ ಮುನೀಬಾ ಅಲಿ ಔಟಾದರೆ, ನಿದಾ ದರ್ ಬಂದ ಬೆನ್ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದರು. ಅಮೀನ್ ಆಟ 11 ರನ್​ಗೆ ಅಂತ್ಯವಾಯಿತು. ಹೀಗೆ ಪಾಕ್ 68 ರನ್​ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ನಾಯಕಿ ಬಿಸ್ಮಾ ಮರೂಫ್ ಜೊತೆಯಾದ ಆಯೇಶಾ ನಸೀಂ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಕೊನೆಯ ವರೆಗೂ ಆಡಿದ ಈ ಜೋಡಿ ಭಾರತೀಯ ಬೌಲರ್​ಗಳನ್ನು ಕಾಡಿದರು.

ಈ ಜೋಡಿಯನ್ನು ಬೇರ್ಪಡಿಸಲು ಭಾರತ ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಮರೂಫ್ 55 ಎಸೆತಗಳಲ್ಲಿ 7 ಫೋರ್​ನೊಂದಿಗೆ ಅಜೇಯ 68 ರನ್ ಚಚ್ಚಿದರೆ, ನಸೀಂ ಕೇವಲ 25 ಎಸೆತಗಳಲ್ಲಿ 2 ಫೊರ್, ಸಿಕ್ಸರ್​ನೊಂದಿಗೆ 43 ರನ್ ಬಾರಿಸಿ ಅಜೇಯರಾಗಿ ಉಳಿದರು. ಪಾಕಿಸ್ತಾನ ಮಹಿಳಾ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ಭಾರತ ಪರ ರಾಧಾ ಯಾದವ್ 2, ದೀಪ್ತಿ ಶರ್ಮಾ ಹಾಗೂ ಪೂಜಾ ತಲಾ 1 ವಿಕೆಟ್ ಪಡೆದರು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಶೆಫಾಲಿ ವರ್ಮಾ ಜೊತೆಗೂಡಿ ಯಸ್ತಿಕಾ ಭಾಟಿಯ (17) 38 ರನ್​ಗಳ ಕೊಡುಗೆ ನೀಡಿದರು. ಶಫಾಲಿ 25 ಎಸೆತಗಳಲ್ಲಿ 4 ಫೋರ್​ನೊಂದಿಗೆ 33 ರನ್ ಗಳಿಸಿದರು. ನಾಯಕಿ ಹರ್ಮನ್​ಪ್ರೀತ್ ಕೌರ್ 12 ಎಸೆತಗಳಲ್ಲಿ 16 ರನ್ ಗಳಿಸಿದರು. ಒಂದು ಹಂತದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಭರ್ಜರಿ ಅಟವಾಡಿದ ಜೆಮಿಯಾ ಸೋಲಿನ ಅಪಾಯದಿಂದ ತಂಡವನ್ನು ಪಾರು ಮಾಡಿದರು. ಇವರಿಗೆ ರಿಚ್ಚಾ ಘೋಷ್ ಉತ್ತಮ ಸಾಥ್ ನೀಡಿದರು.

ಕೊನೆಯ 3 ಓವರ್​ಗಳಲ್ಲಿ ಭಾರತದ ಗೆಲುವಿಗೆ 28 ರನ್ ಬೇಕಾಗಿತ್ತು. ಆದರೆ, ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೆಮಿಯಾ ಹಾಗೂ ರಿಚ್ಚಾ ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವು ತಂದಿಟ್ಟರು. ಭಾರತ 19 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿ 7 ವಿಕೆಟ್​ಗಳಿಂದ ಗೆದ್ದು ಬೀಗಿತು ಜೆಮಿಯಾ 38 ಎಸೆತಗಳಲ್ಲಿ 8 ಫೋರ್​ನೊಂದಿಗೆ ಅಜೇಯ 53 ಹಾಗೂ ರಿಚ್ಚಾ 20 ಎಸೆತಗಳಲ್ಲಿ 5 ಫೋರ್​​ನೊಂದಿಗೆ ಅಜೇಯ 31 ರನ್ ಸಿಡಿಸಿದರು. ಭಾರತ ಮಹಿಳಾ ತಂಡ ತನ್ನ ಮುಂದಿನ ಪಂದ್ಯವನ್ನು ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ