IND vs PAK: ಪಾಕ್ ವೇಗಿಯ ಶೂ ಲೇಸ್ ಕಟ್ಟಿದ ಕೊಹ್ಲಿ; ಅಹಂ ಇಲ್ಲದ ಅರಸ ಎಂದ ವಿಶ್ವ ಕ್ರಿಕೆಟ್

Virat Kohli's Sportsmanship: ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ತಮ್ಮ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಪಾಕಿಸ್ತಾನದ ಬೌಲರ್ ನಸೀಮ್ ಷಾ ಅವರ ಶೂ ಲೇಸ್ ಬಿಚ್ಚಿದಾಗ, ಕೊಹ್ಲಿ ಅದನ್ನು ಕಟ್ಟಲು ಸಹಾಯ ಮಾಡಿದರು. ಕೊಹ್ಲಿಯ ಈ ಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

IND vs PAK: ಪಾಕ್ ವೇಗಿಯ ಶೂ ಲೇಸ್ ಕಟ್ಟಿದ ಕೊಹ್ಲಿ; ಅಹಂ ಇಲ್ಲದ ಅರಸ ಎಂದ ವಿಶ್ವ ಕ್ರಿಕೆಟ್
Virat Kohli

Updated on: Feb 23, 2025 | 9:37 PM

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಎಲ್ಲರೂ ಜಿದ್ದಾಜಿದ್ದಿನ ಹೋರಾಟ, ಮೈದಾನದಲ್ಲಿ ಕಾಲ್ಕೆರೆದು ಜಗಳ ಮಾಡುವುದು, ಬರೀ ಇಂತಹದ್ದನ್ನೇ ನಿರೀಕ್ಷಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಉಭಯ ತಂಡಗಳ ಆಟಗಾರರ ಮನೋಭಾವ ಸಂಪೂರ್ಣವಾಗಿ ಬದಲಾಗಿದೆ. ಎರಡೂ ತಂಡಗಳ ಆಟಗಾರರ ಮೈದಾನದಲ್ಲಿ ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿಯುತ್ತಿದ್ದಾರೆ. ಇದೀಗ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲೂ ಅಂತಹ ಘಟನೆ ನಡೆದಿದ್ದು, ವಿಶ್ವ ಕ್ರಿಕೆಟ್​ನ ಸಾಮ್ರಾಟ ವಿರಾಟ್ ಕೊಹ್ಲಿ ತಮ್ಮ ಸರಳತೆಯ ಮೂಲಕವೇ ಎಲ್ಲರ ಹೃದಯ ಗೆದ್ದಿದ್ದಾರೆ.

ಶೂ ಲೇಸ್ ಕಟ್ಟಿದ ಕೊಹ್ಲಿ

ಅಷ್ಟಕ್ಕೂ ವಿರಾಟ್ ಕೊಹ್ಲಿ ಮಾಡಿದ್ದೇನೆಂದರೆ, ಪಾಕಿಸ್ತಾನ ತಂಡದ ಯುವ ವೇಗದ ಬೌಲರ್ ನಸೀಮ್ ಶಾ ಬ್ಯಾಟಿಂಗ್ ಮಾಡುವ ವೇಳೆ ಅವರ ಶೂ ಲೇಸ್ ಕಳಚಿತ್ತು. ಇದನ್ನು ನೋಡಿದ ಕೊಹ್ಲಿ ನಸೀಮ್ ಬಳಿಗೆ ಬಂದು ಬಿಚ್ಚಿದ್ದ ಶೂ ಲೇಸ್​ ಅನ್ನು ಸರಿಯಾಗಿ ಕಟ್ಟಿ ಅಲ್ಲಿಂದ ನಿರ್ಗಮಿಸಿದರು. ಇದೀಗ ಕೊಹ್ಲಿ, ನಸೀಮ್ ಅವರ ಶೂ ಲೇಸ್ ಕಟ್ಟುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಕ್ರಿಕೆಟ್ ಆಡುವ ಎರಡು ರಾಷ್ಟ್ರಗಳ ನಡುವಿನ ಪರಸ್ಪರ ಗೌರವವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕೊಹ್ಲಿಯ ಈ ನಡೆಯನ್ನು ಕ್ರೀಡಾ ಮನೋಭಾವದ ನಿಜವಾದ ಪ್ರತಿಬಿಂಬ ಎಂದು ಹಲವರು ಕರೆದರೆ, ಇನ್ನು ಕೆಲವರು ಮೈದಾನದಲ್ಲಿ ಸ್ಪರ್ಧೆ ತೀವ್ರವಾಗಿದ್ದರೂ, ಕ್ರೀಡಾ ಮನೋಭಾವವು ಕ್ರಿಕೆಟ್‌ನ ಮೂಲ ಮೌಲ್ಯವಾಗಿ ಉಳಿದಿದೆ ಎಂದಿದ್ದಾರೆ.

ದಾಖಲೆಗಳ ಮಾಲೆ ಕಟ್ಟಿದ ಕೊಹ್ಲಿ

ಇನ್ನು ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ.. ರೋಹಿತ್ ಬೇಗನೇ ವಿಕೆಟ್ ಒಪ್ಪಿಸಿದರಿಂದ ಆರಂಂಭಿಕ ಓವರ್​ಗಳಲ್ಲೇ ಬ್ಯಾಟಿಂಗ್​ಗೆ ಬಂದ ವಿರಾಟ್ ಅಜೇಯ ಅರ್ಧಶತಕ ಸಿಡಿಸಿ ಆಡುತ್ತಿದ್ದಾರೆ. ಅಲ್ಲದೆ ಪಾಕಿಸ್ತಾನ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅನೇಕ ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಅದರಲ್ಲಿ ಏಕದಿನದಲ್ಲಿ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ 14 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೊಹ್ಲಿ ಪಾಲಾಗಿದೆ. ಹಾಗೆಯೇ

ಪಾಕಿಸ್ತಾನ ವಿರುದ್ಧ ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಕೊಹ್ಲಿ ಪಾಲಾಗಿದೆ. ಈ ಸುದ್ದಿ ಬರೆಯುವ ಹೊತ್ತಿಗೆ, ಅವರು 9 ಇನ್ನಿಂಗ್ಸ್‌ಗಳಲ್ಲಿ 392* ರನ್‌ಗಳನ್ನು ಗಳಿಸಿದ್ದಾರೆ. ರೋಹಿತ್ ಶರ್ಮಾ 7 ಇನ್ನಿಂಗ್ಸ್‌ಗಳಲ್ಲಿ 370 ರನ್ ಸಿಡಿಸಿದ್ದರೆ, ಸಚಿನ್ ತೆಂಡೂಲ್ಕರ್ 6 ಇನ್ನಿಂಗ್ಸ್‌ಗಳಲ್ಲಿ 321 ರನ್, ರಾಹುಲ್ ದ್ರಾವಿಡ್ 4 ಇನ್ನಿಂಗ್ಸ್‌ಗಳಲ್ಲಿ 248 ರನ್, ಶಿಖರ್ ಧವನ್ 4 ಇನ್ನಿಂಗ್ಸ್‌ಗಳಲ್ಲಿ 210 ರನ್ ಮತ್ತು ಸುರೇಶ್ ರೈನಾ 3 ಇನ್ನಿಂಗ್ಸ್‌ಗಳಲ್ಲಿ 156 ರನ್ ಬಾರಿಸಿದ್ದಾರೆ.