AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಕೊಹ್ಲಿ ಶತಕ, ಸೋಲಿಗೆ ಸೇಡು ತೀರಿಸಿಕೊಂಡ ಭಾರತ; ಪಾಕಿಸ್ತಾನ ಟೂರ್ನಿಯಿಂದ ಔಟ್..!

Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಅಜೇಯ ಓಟ ಮುಂದುವರೆಸಿದೆ. ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ವಿರಾಟ್ ಕೊಹ್ಲಿ ಅವರ ಅದ್ಭುತ ಶತಕ ಗೆಲುವಿಗೆ ಪ್ರಮುಖ ಕಾರಣ. ಪಾಕಿಸ್ತಾನ 241 ರನ್ ಗಳಿಸಿದರೆ, ಭಾರತ ಸುಲಭವಾಗಿ ಗುರಿ ಮುಟ್ಟಿತು.

IND vs PAK: ಕೊಹ್ಲಿ ಶತಕ, ಸೋಲಿಗೆ ಸೇಡು ತೀರಿಸಿಕೊಂಡ ಭಾರತ; ಪಾಕಿಸ್ತಾನ ಟೂರ್ನಿಯಿಂದ ಔಟ್..!
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Mar 02, 2025 | 2:20 PM

Share

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಅಜೇಯ ಓಟ ಮುಂದುವರೆದಿದೆ. ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ಟೀಂ ಇಂಡಿಯಾ ಮತ್ತೊಮ್ಮೆ 242 ರನ್‌ಗಳ ಗುರಿಯನ್ನು ಯಾವುದೇ ತೊಂದರೆಯಿಲ್ಲದೆ ಅದ್ಭುತ ರೀತಿಯಲ್ಲಿ ಬೆನ್ನಟ್ಟಿದೆ. ಟೀಂ ಇಂಡಿಯಾದ ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು. ಏಕೆಂದರೆ ಸಂಕಷ್ಟದ ಸಮಯದಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇತ್ತ ಭಾರತದ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ, ತನ್ನದೇ ತವರಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆಯಾದರೂ, ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬೀಳುವ ಅಂಚಿನಲ್ಲಿದೆ.

ಆರಂಭದಲ್ಲೇ ಮುಗ್ಗರಿಸಿದ ಪಾಕ್

ಫೆಬ್ರವರಿ 23 ರ ಭಾನುವಾರ ದುಬೈನಲ್ಲಿ ನಡೆದ ಈ ಬ್ಲಾಕ್‌ಬಸ್ಟರ್ ಪಂದ್ಯಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಆದರೆ ಅಭಿಮಾನಿಗಳು ನಿರೀಕ್ಷಿಸಿದ ಮತ್ತು ಬಯಸಿದಷ್ಟು ರೋಮಾಂಚನಕಾರಿಯಾಗಿ ಈ ಪಂದ್ಯ ನಡೆಯಲಿಲ್ಲ. ಇಡೀ ಪಂದ್ಯದಲ್ಲಿ ಪಾಕ್ ಅಭಿಮಾನಿಗಳು ಸಂತಸ ಪಡುವಂತಹ ಒಂದೇ ಒಂದು ಸನ್ನಿವೇಶವನ್ನು ಪಾಕ್ ತಂಡ ಸೃಷ್ಟಿಸಲಿಲ್ಲ. ಆದರೆ ಭಾರತೀಯ ಅಭಿಮಾನಿಗಳಿಗೆ ಮಾತ್ರ ಈ ಪಂದ್ಯ ಹಬ್ಬದಂತ್ತಿತ್ತು. ಏಕೆಂದರೆ ಈ ಪಂದ್ಯವನ್ನು ಭಾರತ ಏಕಪಕ್ಷೀಯವಾಗಿ ಗೆದ್ದುಕೊಂಡರೆ, ಇನ್ನೊಂದು ಖುಷಿಯ ವಿಚಾರವೆಂದರೆ ಇಷ್ಟು ದಿನ ರನ್ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ರೋಹಿತ್ ಶರ್ಮಾ ಬೇಗನೆ ಔಟಾದ ನಂತರ ಕ್ರೀಸ್‌ಗೆ ಬಂದ ಕೊಹ್ಲಿ, ಶುಭ್​ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ ಉತ್ತಮ ಜೊತೆಯಾಟವನ್ನು ಹಂಚಿಕೊಂಡಿದಲ್ಲದೆ, ತಂಡಕ್ಕೆ ಗೆಲುವು ತಂದುಕೊಟ್ಟರು. ಇದರ ಜೊತೆಗೆ ತಮ್ಮ 51 ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು.

ರಿಜ್ವಾನ್- ಶಕೀಲ್ ಶತಕದ ಜೊತೆಯಾಟ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಮೊದಲ ವಿಕೆಟ್​ಗೆ 41 ರನ್​ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಬಾಬರ್ ಆಝಂ ಬಂದ ತಕ್ಷಣ ಕೆಲವು ಅತ್ಯುತ್ತಮ ಹೊಡೆತಗಳನ್ನು ಹೊಡೆಯುವ ಮೂಲಕ ಪಾಕಿಸ್ತಾನಕ್ಕೆ ನಿರೀಕ್ಷೆಗಿಂತ ಉತ್ತಮ ಆರಂಭವನ್ನು ನೀಡಿದ್ದರಿಂದ ಟೀಂ ಇಂಡಿಯಾ ಆರಂಭದಲ್ಲಿ ವಿಕೆಟ್‌ಗಾಗಿ ಸ್ವಲ್ಪ ಕಾಯಬೇಕಾಯಿತು. ಆದರೆ ಹಾರ್ದಿಕ್ ಪಾಂಡ್ಯ ಬಾಬರ್ ಅವರ ವಿಕೆಟ್ ಪಡೆಯುವ ಮೂಲಕ ಪಾಕ್ ತಂಡಕ್ಕೆ ಮೊದಲ ಆಘಾತ ನೀಡಿದರು. ಬಾಬರ್ ಔಟಾದ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಇಮಾಮ್ ಉಲ್ ಹಕ್ ಕೂಡ ಮುಂದಿನ ಓವರ್‌ನಲ್ಲಿ ಔಟಾದರು. ಇಲ್ಲಿಂದ ಪಾಕಿಸ್ತಾನ ತಂಡ ಸಂಕಷ್ಟದಲ್ಲಿರುವಂತೆ ಕಂಡಿತು ಆದರೆ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಸ್ಥಿರಗೊಳಿಸಿದರು. ಒಟ್ಟಾಗಿ ಅವರು ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.

ಕುಲ್ದೀಪ್- ಹಾರ್ದಿಕ್ ಮ್ಯಾಜಿಕ್

ಆದಾಗ್ಯೂ, ಇಬ್ಬರು ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರು. ಇದರಿಂದಾಗಿ ಪಾಕಿಸ್ತಾನ ತಂಡವು ದೊಡ್ಡ ಸ್ಕೋರ್ ಕಡೆಗೆ ಸಾಗುತ್ತಿರುವಂತೆ ಕಾಣಲಿಲ್ಲ. ಸೌದ್ ಶಕೀಲ್ ಅದ್ಭುತ ಅರ್ಧಶತಕ ಬಾರಿಸಿದರೆ, ರಿಜ್ವಾನ್ ಅರ್ಧಶತಕದಂಚಿನಲ್ಲಿ ಎಡವಿದರು. ಇಬ್ಬರೂ ಔಟಾದ ನಂತರ ಮಧ್ಯಮ ಕ್ರಮಾಂಕ ಮತ್ತೊಮ್ಮೆ ಕೈಕೊಟ್ಟಿತು. ಕೊನೆಯಲ್ಲಿ ಖುಸ್ದಿಲ್ ಷಾ ಹೊಡಿಬಡಿ ಆಟದ ಮೂಲಕ ತಂಡವನ್ನು 241 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ 3 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.

ಭಾರತಕ್ಕೆ ಸ್ಫೋಟಕ ಆರಂಭ

ಪಾಕ್ ನೀಡಿದ 241 ರನ್​ಗಳ ಗೆಲುವಿನ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಮತ್ತೊಮ್ಮೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿಕೊಟ್ಟರು. ಪಾಕ್ ವೇಗಿಗಳಾದ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಎಸೆತಗಳಲ್ಲಿ ಬೌಂಡರಿಗಳನ್ನು ಕಲೆಹಾಕಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಆದರೆ ಶಾಹೀನ್ ಎಸೆದ ಅದ್ಭುತ ಯಾರ್ಕರ್‌ಗೆ ರೋಹಿತ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಆದರೆ ರೋಹಿತ್ ವಿಕೆಟ್ ಬಳಿಕವೂ ತನ್ನ ನೈಜ ಆಟವನ್ನು ಮುಂದುವರೆಸಿದ ಶುಭ್​ಮನ್ ಗಿಲ್, ಶಾಹೀನ್ ಮೇಲೆ ದಾಳಿ ಮಾಡಿ ಸತತ 2 ಓವರ್‌ಗಳಲ್ಲಿ 5 ಬೌಂಡರಿಗಳನ್ನು ಬಾರಿಸಿದರು. ಮತ್ತೊಂದೆಡೆ, ಕೊಹ್ಲಿ ಹ್ಯಾರಿಸ್ ರೌಫ್ ಎಸೆತದಲ್ಲಿ ಬೌಂಡರಿ ಬಾರಿಸಿದರು. ಈ ಇಬ್ಬರ ನಡುವೆ ಉತ್ತಮ ಜತೆಯಾಟ ಕಂಡುಬಂತು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ಗಿಲ್ ತಂಡವನ್ನು 100 ರನ್‌ಗಳ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು.

ಅಜೇಯ ಶತಕ ಚಚ್ಚಿದ ಕೊಹ್ಲಿ

ಮತ್ತೊಂದೆಡೆ ಪಾಕಿಸ್ತಾನ ವಿರುದ್ಧ ತಮ್ಮ ಅತ್ಯುತ್ತಮ ದಾಖಲೆಯನ್ನು ಮುಂದುವರೆಸಿದ ಕೊಹ್ಲಿ ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್‌ಗೆ ಅಡಿಪಾಯ ಹಾಕಿದರು. ಗಿಲ್ ಔಟಾದ ನಂತರ, ಕೊಹ್ಲಿ ತಮ್ಮ ಎಂದಿನ ಶೈಲಿಯಲ್ಲಿ ರನ್ ಚೇಸ್ ಜವಾಬ್ದಾರಿಯನ್ನು ವಹಿಸಿಕೊಂಡು ಅದ್ಭುತ ಅರ್ಧಶತಕ ದಾಖಲಿಸಿದರು. ಇತ್ತ ಗಿಲ್ ವಿಕೆಟ್ ಬಳಿಕ ಬಂದ ಶ್ರೇಯಸ್ ಅಯ್ಯರ್ ಕೂಡ ಆರಂಭದಲ್ಲಿ ರನ್ ಕಲೆಹಾಕಲು ಪರೆದಾಡಿದರಾದರೂ, ಕ್ರೀಸ್​ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಪಾಕ್ ಬೌಲರ್‌ಗಳನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ಅಯ್ಯರ್ ಅರ್ಧಶತಕ ಬಾರಿಸಿ ಔಟಾದರೆ, ಕೊಹ್ಲಿ ಮಾತ್ರ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದಲ್ಲದೆ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 pm, Sun, 23 February 25