ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಎರಡು ದಿನಗಳ ಆಟ ಮುಕ್ತಾಯಗೊಂಡಿದ್ದು ಮೇಲ್ನೋಟಕ್ಕೆ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದಂತಿದೆ. ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಸೀಸ್ ಬೌಲಿಂಗ್ ಪಡೆಯನ್ನು ಎಚ್ಚರಿಕೆಯಿಂದ ಎದುರಿಸುತ್ತ ಕ್ರೀಸ್ನಲ್ಲಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿ 144 ರನ್ಗಳ ಮುನ್ನಡೆಯಲ್ಲಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಶತಕ ತಂಡದ ಮೊತ್ತ ಹೆಚ್ಚಲು ಸಹಾಯ ಮಾಡಿತು. ಆದರೆ, ಇದಕ್ಕೂ ಮುನ್ನ ಹಿಟ್ಮ್ಯಾನ್ ಔಟ್ ಆಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಇದಕ್ಕೆ ಕಾರಣವಾಗಿದ್ದು ವಿರಾಟ್ ಕೊಹ್ಲಿ (Virat Kohli).
48ನೇ ಓವರ್ನ ನೇಥನ್ ಲ್ಯಾನ್ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ನಾನ್ ಸ್ಟ್ರೈಕರ್ನಲ್ಲಿದ್ದ ರೋಹಿತ್ ಶರ್ಮಾಗೆ ಓಡಿ ಬರುವಂತೆ ಕೊಹ್ಲಿ ಕರೆ ನೀಡಿದರು. ಆದರೆ, ಚೆಂಡು ದೂರ ತೆರಳದೆ ಅಲ್ಲೆ ಇದ್ದ ಫೀಲ್ಡರ್ ಕೈಗೆ ಸೇರಿತು. ಒಂದು ರನ್ ಕಲೆಹಾಕಲೂ ಅಲ್ಲಿ ಸಮಯವಿರಲಿಲ್ಲ. ಅತ್ತ ಕೊಹ್ಲಿ ಮಾತಿನಂತೆ ರೋಹಿತ್ ಅರ್ಧದ ವರೆಗೆ ಓಡಿ ಬಂದರು. ಚೆಂಡು ಅಲ್ಲೆ ಸರ್ಕಲ್ನಲ್ಲಿ ಇದ್ದಿರುವುದನ್ನು ಗಮನಿಸಿದ ಕೊಹ್ಲಿ ತಕ್ಷಣ ತನ್ನ ನಿರ್ಧಾರವನ್ನು ಬದಲಾಯಿಸಿ ನೋ ಎಂಬ ಕರೆ ಕೊಟ್ಟರು. ವಿಕೆಟ್ ಬಿಟ್ಟು ರನ್ಗೆಂದು ಅರ್ಧ ದಾರಿಯ ವರೆಗೆ ಬಂದಿದ್ದ ರೋಹಿತ್ ಕೂಡಲೇ ಹಿಂತಿರುಗಿ ನಾನ್ ಸ್ಟ್ರೈಕರ್ ಕಡೆ ತಿರುಗಿ ಓಡಿದರು.
ರೋಹಿತ್ ಶರ್ಮಾ ಡೈವ್ ಬಿದ್ದು ಕೂದಲೆಳೆಯ ಅಂತರದಿಂದ ರನೌಟ್ನಿಂದ ಪಾರಾದರು. ತಪ್ಪು ಸಂಪೂರ್ಣವಾಗಿ ವಿರಾಟ್ ಮೇಲಿತ್ತು. ರನ್ ಗಳಿಸುವ ಅವಕಾಶ ಇಲ್ಲದಿದ್ದರೂ ಓಡಿ ಬರುವಂತೆ ರೋಹಿತ್ಗೆ ಕರೆ ನೀಡಿದ್ದು ಕೊಹ್ಲಿಯ ತಪ್ಪಾಗಿತ್ತು. ಇದನ್ನು ಅರಿತ ಕೊಹ್ಲಿ ತಕ್ಷಣವೇ ರೋಹಿತ್ ಬಳಿ ಕೈಸನ್ನೆ ಮೂಲಕ ಕ್ಷಮೆ ಕೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
— Nitin Varshney (@NitinVa15588475) February 10, 2023
ಭಾರತ-ಆಸ್ಟ್ರೇಲಿಯಾ ಪ್ರಥಮ ಟೆಸ್ಟ್ನ ಇಂದಿನ ಮೂರನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾಂಗರೂ ಪಡೆಯನ್ನು 177 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಎರಡನೇ ದಿನದಾಟದಲ್ಲಿ ಭಾರತ ಪರ ಅಶ್ವಿನ್ 62 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ಪೂಜಾರ (7), ವಿರಾಟ್ ಕೊಹ್ಲಿ 12, ಸೂರ್ಯಕುಮಾರ್ ಯಾದವ್ (8) ಬೇಗನೆ ಔಟಾದರು. 6ನೇ ವಿಕೆಟ್ಗೆ ವೀಂದ್ರ ಜಡೇಜಾ- ರೋಹಿತ್ ಜೊತೆಯಾಗಿ ತಂಡದ ಮೊತ್ತವನ್ನು 200ರ ಗಡಿ ದಾಡಿಸಿದರು. 61 ರನ್ಗಳ ಕಾಣಿಕೆ ನೀಡಿದರು.
ರೋಹಿತ್ 120 ರನ್ ಗಳಿಸಿ ಔಟಾದರೆ ಬಂದ ಬೆನ್ನಲ್ಲೇ ಶ್ರೀಕರ್ ಭರತ್ (8) ಮೋಡಿ ಮಾಡಲು ವಿಫಲರಾದರು. ಈ ವೇಳೆ ಜಡೇಜಾ ಜೊತೆಯಾದ ಅಕ್ಷರ್ ಪಟೇಲ್ ಆಸೀಸ್ ಬೌಲರ್ಗಳನ್ನು ಧೈರ್ಯದಿಂದ ಎದುರಿಸಿ ಭರ್ಜರಿ ಆಟ ಪ್ರದರ್ಶಿಸಿದರು. ಜಡೇಜಾ 66 ರನ್ ಗಳಿಸಿ ಹಾಗೂ ಅಕ್ಷರ್ ಪಟೇಲ್ 52 ಬಾರಿಸಿ ಕ್ರೀಸ್ನಲ್ಲಿದ್ದಾರೆ. ಭಾರತ 114 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 am, Sat, 11 February 23