Rohit Sharma: ದಿನದಾಟ ಮುಗಿಯಲು 7 ಎಸೆತ ಬಾಕಿಯಿದ್ದಾಗ ರಾಹುಲ್ ಔಟ್: ಕೋಪದಲ್ಲಿ ರೋಹಿತ್ ಏನು ಮಾಡಿದ್ರು ನೋಡಿ
India vs Australia 1st Test; ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿಯಲು 7 ಬಾಲ್ ಬಾಕಿ ಇದ್ದಾಗ ಕೆಎಲ್ ರಾಹುಲ್ (20) ಔಟಾದರು. ಈ ಸಂದರ್ಭ ಕೋಪಗೊಂಡ ರೋಹಿತ್ ಶರ್ಮಾ ಏನು ಮಾಡಿದರು ನೋಡಿ.
ಭಾರತ ಕ್ರಿಕೆಟ್ ತಂಡ ಸದ್ಯ ಆಸ್ಟ್ರೇಲಿಯಾ (India vs Australia) ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯುತ್ತಿದೆ. ಮೊದಲ ದಿನವೇ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಕೇವಲ 177 ರನ್ಗೆ ಆಲೌಟ್ ಆಯಿತು. ಸುಮಾರು ಆರು ತಿಂಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲೇ ಮ್ಯಾಜಿಕ್ ಮಾಡಿದರು. ಆಸೀಸ್ ಪತನದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದೆ. ಕೆಎಲ್ ರಾಹುಲ್ (KL Rahul) 71 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರೆ, ರೋಹಿತ್ (Rohit Sharma)-ಅಶ್ವಿನ್ ಕ್ರೀಸ್ನಲ್ಲಿದ್ದಾರೆ.
ಉಪ ನಾಯಕ ಕೆಎಲ್ ರಾಹುಲ್ ಕಳಪೆ ಫಾರ್ಮ್ ಟೆಸ್ಟ್ನಲ್ಲೂ ಮುಂದುವರೆಯಿತು. ವಿವಾಹದ ಬಳಿಕ ತಂಡಕ್ಕೆ ಮರಳಿದ ರಾಹುಲ್ ಬ್ಯಾಟ್ನಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಯಾಕೆಂದರೆ ಟೆಸ್ಟ್ ಆರಂಭವಾಗುವ ಒಂದು ವಾರ ಮುನ್ನವೇ ರಾಹುಲ್ ನೆಟ್ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದರು. ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್ ಪಡೆದುಕೊಂಡಿದ್ದರು. ಆದರೆ, ರಾಹುಲ್ ಆಟ 20 ರನ್ಗೆ ಅಂತ್ಯವಾಯಿತು. ಅದರಲ್ಲೂ ಮೊದಲ ದಿನದಾಟ ಮುಗಿಯಲು ಕೇವಲ 7 ಬಾಲ್ಗಳು ಬಾಕಿ ಇದ್ದಾಗ ರಾಹುಲ್ ನಿರ್ಗಮಿಸಿದ್ದು ನಾಯಕ ರೋಹಿತ್ ಶರ್ಮಾ ಅವರಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
23ನೇ ಓವರ್ನಲ್ಲಿ ಸ್ಪಿನ್ನರ್ ಟಾಡ್ ಮರ್ಫಿ ಬೌಲಿಂಗ್ನ 5ನೇ ಎಸೆತದಲ್ಲಿ ರಾಹುಲ್ ಚೆಂಡನ್ನು ನೇರವಾಗಿ ಹೊಡೆಯಲು ಯತ್ನಿಸಿದರು. ಆದರೆ, ಚೆಂಡು ಬೌಲರ್ ಕೈಗೆ ಸೇರಿತು. ಈ ಮೂಲಕ ಮರ್ಫಿ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದರು. ಅತ್ತ ನಾನ್ಸ್ಟ್ರೈಕ್ನಲ್ಲಿದ್ದ ನಾಯಕ ರೋಹಿತ್ ಶರ್ಮಾ ಕೋಪಗೊಂಡು ಆಕಾಶ ನೋಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Virat Kohli: ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾದ ಕಿಂಗ್ ಕೊಹ್ಲಿ ಕೈಬಿಟ್ಟ ಕ್ಯಾಚ್..!
— Anna 24GhanteChaukanna (@Anna24GhanteCh2) February 9, 2023
ಮೊದಲ ದಿನದಾಟ ಹೇಗಿತ್ತು?:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎರಡು ರನ್ಗೆ ಎರಡು ವಿಕೆಟ್ ಕಳೆದುಕೊಂಡಿತು. ಡೇವಿಡ್ ವಾರ್ನರ್ರನ್ನು (1) ಶಮಿ ಪೆವಿಲಿಯನ್ಗೆ ಅಟ್ಟಿದರೆ ಉಸ್ಮಾನ್ ಖ್ವಾಜಾ (1) ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. ಈ ಸಂದರ್ಭ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ತಂಡಕ್ಕೆ ಆಸರೆಯಾಗಿ ನಿಂತರು. ಎಚ್ಚರಿಕೆಯ ಆಟವಾಡಿದ ಈ ಜೋಡಿ 82 ರನ್ಗಳ ಕಾಣಿಕೆ ನೀಡಿತು. ಇವರ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ರವೀಂದ್ರ ಜಡೇಜಾ. ಕ್ರೀಸ್ ಕಚ್ಚಿ ಆಡುತ್ತಿದ್ದ ಲಾಬುಶೇನ್ಗೆ ಜಡೇಜಾ ಕೆಡ್ಡಾ ತೋರಿದರು. 123 ಎಸತಗಳಲ್ಲಿ 49 ರನ್ ಗಳಿಸಿ ಮಾರ್ನಸ್ ಔಟಾದರೆ, ಅತ್ತ ಅಪಾಯಕಾರಿ ಗೋಚರಿಸಿದ ಸ್ಮಿತ್ಗೂ (37) ಜಡೇಜಾ ಪೆವಿಲಿಯನ್ ಹಾದಿ ತೋರಿದರು.
ನಂತರ ಬಂದ ಬ್ಯಾಟರ್ಗಳ ಪೈಕಿ ಹ್ಯಾಂಡ್ಸ್ಕಾಂಬ್ 31 ಹಾಗೂ ಅಲೆಕ್ಸ್ ಕ್ಯಾರಿ 36 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸ್ಕೋರ್ ಎರಡಂಕಿ ದಾಟಲಿಲ್ಲ. ಮೂವರು ಬ್ಯಾಟರ್ಗಳು ಸೊನ್ನೆ ಸುತ್ತಿದರು. ಆಸ್ಟ್ರೇಲಿಯಾ 63.5 ಓವರ್ಗಳಲ್ಲಿ 177 ರನ್ಗೆ ಆಲೌಟ್ ಆಯಿತು. ಭಾರತ ಪರ ಭರ್ಜರಿ ಕಮ್ಬ್ಯಾಕ್ ಮಾಡಿದ ರವೀಂದ್ರ ಜಡೇಜಾ 22 ಓವರ್ಗೆ 47 ರನ್ ನೀಡಿ 5 ವಿಕೆಟ್ ಕಿತ್ತರೆ, ಆರ್. ಅಶ್ವಿನ್ 3, ಶಮಿ ಹಾಗೂ ಸಿರಾಜ್ ತಲಾ 1 ವಿಕೆಟ್ ಪಡೆದರು.
ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ರೋಹಿತ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ ಕೆಎಲ್ ರಾಹುಲ್ ಉತ್ತಮ ಸಾಥ್ ನೀಡಿದರು. ಆದರೆ, ಇವರಿಬ್ಬರ ಜೊತೆಯಾಟ 76 ರನ್ಗೆ ಅಂತ್ಯವಾಯಿತು. ರಾಹುಲ್ 71 ಎಸೆತಗಳಲ್ಲಿ 20 ರನ್ಗೆ ಔಟಾದರು. ಹೀಗೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ಕಳೆದುಕೊಂಡು 77 ರನ್ ಕಲೆಹಾಕಿದೆ. ರೋಹಿತ್ 69 ಎಸೆತಗಳಲ್ಲಿ 56 ರನ್ ಗಳಿಸಿ ಹಾಗೂ ರವಿಚಂದ್ರನ್ ಅಶ್ವಿನ್ 5 ಎಸೆತಗಳಲ್ಲಿ ಖಾತೆ ತೆರೆಯದೆ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Fri, 10 February 23