IND vs AUS 1st Test: ಜಡೇಜಾಗೆ ಸಿರಾಜ್ ನೀಡಿದ್ದೇನು? ಮೋಸದಾಟಕ್ಕೆ ಮುಂದಾದ್ರ ಟೀಮ್ ಇಂಡಿಯಾ?
IND vs AUS 1st Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ದಾಳಿಗೆ ತತ್ತರಿಸಿತು. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ಕೇವಲ 177 ರನ್ಗಳಿಗೆ ಆಸ್ಟ್ರೇಲಿಯಾ ತಂಡ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ಜಡೇಜಾ 5 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಕಬಳಿಸಿ ಮಿಂಚಿದರು.
India vs Australia 1st Test: ನಾಗ್ಪುರದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯವು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ ತಂಡದ ಇನಿಂಗ್ಸ್ ವೇಳೆ ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಚೆಂಡಿಗೆ ಏನೋ ಉಜ್ಜುತ್ತಿರುವುದಂತೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಬೆನ್ನಲ್ಲೇ ಮೈದಾನದಲ್ಲಿ ರವೀಂದ್ರ ಜಡೇಜಾ ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಐಸಿಸಿ ನಿಯಮದ ಪ್ರಕಾರ ಚೆಂಡಿಗೆ ಹೊಳಪು ನೀಡುವಂತಹ ಅಥವಾ ವಿರೂಪಗೊಳಿಸುವಂತಹ ಯಾವುದೇ ವಸ್ತುವನ್ನು ಬಳಸುವಂತಿಲ್ಲ. ಅಷ್ಟೇ ಅಲ್ಲದೆ ಬಾಲ್ಗೆ ಎಂಜಲನ್ನು ಒರೆಸುವುದನ್ನು ಕೂಡ ನಿಷೇಧಿಸಲಾಗಿದೆ. ಇದಾಗ್ಯೂ ರವೀಂದ್ರ ಜಡೇಜಾ ಬೆರಳಿಗೆ ಒರೆಸಿರುವುದೇನು ಎಂಬುದೇ ದೊಡ್ಡ ಪ್ರಶ್ನೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 120 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್ನಲ್ಲಿದ್ದ ಅಲೆಕ್ಸ್ ಕ್ಯಾರಿ ಹಾಗೂ ಪೀಟರ್ ಹ್ಯಾಂಡ್ಸ್ಕಾಂಬ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದರು.
ಇದೇ ವೇಳೆ ದಾಳಿಗಿಳಿದ ರವೀಂದ್ರ ಜಡೇಜಾಗೆ ಮೊಹಮ್ಮದ್ ಸಿರಾಜ್ ಏನೋ ನೀಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿರಾಜ್ ತಮ್ಮ ಮುಂಗೈಯನ್ನು ತೋರಿಸುತ್ತಿದ್ದಂತೆ ಜಡೇಜಾ ಬಲಗೈಯಿಂದ ಏನನ್ನೋ ತೆಗೆದುಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಅದನ್ನು ಬೆರಳಿಗೆ ಉಜ್ಜುತ್ತಿರುವುದು ಕೂಡ ಇಲ್ಲಿ ವೀಕ್ಷಿಸಬಹುದು.
ಇದಾದ ಬಳಿಕವಷ್ಟೇ ಹ್ಯಾಂಡ್ಸ್ಕಾಂಬ್ ಜಡೇಜಾ ಎಸೆತದಲ್ಲಿ ಔಟ್ ಆಗಿದ್ದರು. ಇದೀಗ ರವೀಂದ್ರ ಜಡೇಜಾ ಚೆಂಡಿಗೆ ಉಜ್ಜುತ್ತಿರುವುದೇನು? ಎಂಬುದು ಪ್ರಶ್ನೆಯೊಂದನ್ನು ಹುಟ್ಟುಹಾಕಲಾಗಿದೆ. ಅಲ್ಲದೆ ಈ ವಿಡಿಯೋವನ್ನು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೈನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಕೂಡ ಬೆರಳಿಗೆ ಏನು ಹಾಕುತ್ತಿದ್ದಾನೆ? ಈ ಹಿಂದೆ ಈ ತರ ನೋಡಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅತ್ತ ಮೊದಲ ಇನಿಂಗ್ಸ್ನಲ್ಲಿ ರವೀಂದ್ರ ಜಡೇಜಾ 22 ಓವರ್ಗಳಲ್ಲಿ ಕೇವಲ 47 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದೀಗ ಜಡೇಜಾ ಅವರ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಟೀಮ್ ಇಂಡಿಯಾ ಕುತಂತ್ರದಿಂದ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ ಆಲೌಟ್ ಮಾಡಿದೆ ಎಂದು ಆಸೀಸ್ ಕ್ರಿಕೆಟ್ ಪ್ರೇಮಿಗಳು ಆರೋಪಿಸುತ್ತಿದ್ದಾರೆ.
What do you think of this @tdpaine36 Looks like one player giving grippo to the bowler and him rubbing it all over his spinning finger to me. Thoughts? pic.twitter.com/XjcNedJ3Sc
— Darren Lock (@Dags_L) February 9, 2023
ಒಟ್ಟಿನಲ್ಲಿ ಮೊದಲ ಇನಿಂಗ್ಸ್ ಮುಕ್ತಾಯದ ಬೆನ್ನಲ್ಲೇ ವೈರಲ್ ಆಗಿರುವ ಈ ವಿಡಿಯೋದಲ್ಲಿ ಜಡೇಜಾ ಬಳಸಿರುವುದೇನು ಎಂಬುದಕ್ಕೆ ಖುದ್ದು ರವೀಂದ್ರ ಜಡೇಜಾ ಅವರೇ ಉತ್ತರ ನೀಡಬೇಕಾಗಿದೆ. ಅಲ್ಲಿಯವರೆಗೆ ಈ ಚರ್ಚೆಗಳು ಮುಂದುವರೆಯುವ ಸಾಧ್ಯತೆಯಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಕೆಎಲ್ ರಾಹುಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಶ್ರೀಕರ್ ಭರತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖವಾಜಾ , ಮಾರ್ನಸ್ ಲಾಬುಶೇನ್ , ಸ್ಟೀವನ್ ಸ್ಮಿತ್ , ಮ್ಯಾಟ್ ರೆನ್ಶಾ , ಪೀಟರ್ ಹ್ಯಾಂಡ್ಸ್ಕಾಂಬ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ನಾಥನ್ ಲಿಯಾನ್ , ಟಾಡ್ ಮರ್ಫಿ , ಸ್ಕಾಟ್ ಬೋಲ್ಯಾಂಡ್.
Published On - 10:08 pm, Thu, 9 February 23