ಮಣಿರತ್ನಂ ಹೊಸ ಚಿತ್ರದಲ್ಲಿ ಸಾಯಿ ಪಲ್ಲವಿ, ವಿಜಯ್ ಸೇತುಪತಿ ಜೋಡಿ
ಮಣಿರತ್ನಂ ನಿರ್ದೇಶನದ ಸಿನಿಮಾ ಎಂದರೆ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕೌತುಕ ಮೂಡುತ್ತದೆ. ಅವರ ಹೊಸ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರು ಜೋಡಿ ಆಗಲಿದ್ದಾರೆ. ಈ ಮೊದಲು ಧನುಷ್ ಅವರಿಗೆ ಈ ಕಥೆ ಹೇಳಲಾಗಿತ್ತು. ಅವರು ಒಪ್ಪಿಕೊಳ್ಳದ ಕಾರಣ ವಿಜಯ್ ಸೇತುಪತಿ ಅವರಿಗೆ ಈ ಚಾನ್ಸ್ ಸಿಕ್ಕಿದೆ.

ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರ ಮುಂದಿನ ಚಿತ್ರದ ಬಗ್ಗೆ ಸಿನಿರಂಗದಲ್ಲಿ ಒಂದಷ್ಟು ಚರ್ಚೆ ನಡೆಯುತ್ತಿದೆ. ‘ಥಗ್ ಲೈಫ್’ ಸಿನಿಮಾಗೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಮಣಿರತ್ನಂ ಈಗ ಪ್ರೇಮಕಥೆಯೊಂದನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರತಿಭಾವಂತ ಕಲಾವಿದರಾದ ವಿಜಯ್ ಸೇತುಪತಿ (Vijay Sethupathi) ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ಜೋಡಿಯಾಗಿ ನಟಿಸಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.
ಮೂಲಗಳ ಪ್ರಕಾರ, ಮಣಿರತ್ನಂ ಈ ಕಥೆಯನ್ನು ಮೊದಲು ನಟ ಧನುಷ್ ಅವರಿಗೆ ವಿವರಿಸಿದ್ದರು. ಧನುಷ್ ಅವರಿಗೆ ಕಥೆ ಇಷ್ಟವಾಗಿದ್ದರೂ, ಸಂಭಾವನೆಯ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಅವರು ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆನಂತರ ಸಿಂಬು ಹಾಗೂ ಧ್ರುವ್ ವಿಕ್ರಮ್ ಅವರ ಹೆಸರುಗಳು ಕೇಳಿಬಂದರೂ, ಅಂತಿಮವಾಗಿ ವಿಜಯ್ ಸೇತುಪತಿ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
‘ಚೆಕ್ಕ ಚಿವಂತ ವಾನಂ’ ನಂತರ ಮಣಿರತ್ನಂ ಮತ್ತು ಸೇತುಪತಿ ಜೊತೆಯಾಗಿ ಮಾಡಲಿರುವ ಎರಡನೇ ಸಿನಿಮಾ ಇದಾಗಿದೆ. ಈ ಸಿನಿಮಾಗೆ ನಾಯಕಿಯಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದು, ಇದು ಮಣಿರತ್ನಂ ನಿರ್ದೇಶನದಲ್ಲಿ ಅವರು ನಟಿಸುತ್ತಿರುವ ಮೊದಲ ಸಿನಿಮಾ. ಈ ಹಿಂದೆ ರುಕ್ಮಿಣಿ ವಸಂತ್ ಅವರ ಹೆಸರು ಕೇಳಿಬಂದಿತ್ತಾದರೂ, ಅಂತಿಮವಾಗಿ ಸಾಯಿ ಪಲ್ಲವಿ ಅವರು ಆಯ್ಕೆ ಆಗಿದ್ದಾರೆ.
ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಇಬ್ಬರೂ ಅದ್ಭುತ ಕಲಾವಿದರು ಎಂಬುದು ಈಗಾಗಲೇ ಸಾಬೀತಾಗಿದೆ. ಅವರಿಬ್ಬರ ಫ್ರೆಶ್ ಕಾಂಬಿನೇಷನ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಈ ಸಿನಿಮಾವನ್ನು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಯು ನಿರ್ಮಾಣ ಮಾಡಲಿದೆ. ಆಸ್ಕರ್ ಪ್ರಶಸ್ತಿ ವಿಜೇತ ಮ್ಯೂಸಿಕ್ ಕಂಪೋಸರ್ ಎ.ಆರ್. ರೆಹಮಾನ್ ಅವರು ಸಂಗೀತ ನೀಡಲಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಸಿನಿಮಾನಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಆದರೆ ಜೋಡಿ ಆಗಿ ಅಲ್ಲ
ಈ ಸಿನಿಮಾಗೆ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ. ಸಿನಿಪ್ರೇಮಿಗಳಿಗೆ ಮಣಿರತ್ನಂ ಅವರ ದೃಶ್ಯ ವೈಭವದ ಜೊತೆಗೆ ರೆಹಮಾನ್ ಅವರ ಮೆಲೋಡಿ ಹಾಡುಗಳ ರಸದೌತಣ ಸಿಗುವುದರಲ್ಲಿ ಸಂಶಯವಿಲ್ಲ. ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರ ಕೆಮಿಸ್ಟ್ರಿ ತೆರೆಯ ಮೇಲೆ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




