ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ನ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಟೀಮ್ ಇಂಡಿಯಾ ದಾಳಿಗೆ ತತ್ತರಿಸಿತು. ಜಸ್ಪ್ರೀತ್ ಬುಮ್ರಾ ಎಸೆದ ಪಂದ್ಯದ ಮೂರನೇ ಓವರ್ನ 2ನೇ ಎಸೆತದಲ್ಲಿ ಮಿಚೆಲ್ ಮಾರ್ಷ್ ಅವರ ಬ್ಯಾಟ್ಗೆ ತಾಗಿ ಚೆಂಡು ಸ್ಲಿಪ್ನತ್ತ ಸಾಗಿತ್ತು. ಕ್ಷಣಾರ್ಧದಲ್ಲೇ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು.
ಇದಾದ ಬಳಿಕ ಸ್ಪಿನ್ನರ್ಗಳ ಮೋಡಿಗೆ ತಲೆಬಾಗಿದ ಆಸ್ಟ್ರೇಲಿಯನ್ನರು 49.3 ಓವರ್ಗಳಲ್ಲಿ 199 ರನ್ಗಳಿಗೆ ಆಲೌಟ್ ಆಗಿದ್ದರು. ಇನ್ನು 200 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು.
ಇಶಾನ್ ಕಿಶನ್ (0), ರೋಹಿತ್ ಶರ್ಮಾ (0) ಹಾಗೂ ಶ್ರೇಯಸ್ ಅಯ್ಯರ್ (0) ಶೂನ್ಯಕ್ಕೆ ಔಟಾಗಿ ಅಚ್ಚರಿ ಮೂಡಿಸಿದರು. ಇದಾಗ್ಯೂ ವಿರಾಟ್ ಕೊಹ್ಲಿ (85) ಹಾಗೂ ಕೆಎಲ್ ರಾಹುಲ್ (97) 4ನೇ ವಿಕೆಟ್ಗೆ 165 ರನ್ಗಳ ಜೊತೆಯಾಟವಾಡಿದರು.
ಅಂತಿಮವಾಗಿ 41.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ಗಳಿಸುವ ಮೂಲಕ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಪ್ರಶಂಸಾ ಮೀಟ್ನಲ್ಲಿ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ನೀಡಲಾಯಿತು. ವಿಶ್ವಕಪ್ನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಆಟಗಾರನಿಗೆ ಚಿನ್ನದ ಬಣ್ಣದ ಪದಕವನ್ನು ನೀಡುವ ಸಾಂಪ್ರದಾಯಕ್ಕೆ ಟೀಮ್ ಇಂಡಿಯಾ ನಾಂದಿಯಾಡಿದೆ.
ಅದರಂತೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಫೀಲ್ಡಿಂಗ್ ಮೂಲಕ ಟೀಮ್ ಇಂಡಿಯಾಗೆ ಗೆಲುವಿನಲ್ಲಿ ಎಲ್ಲಾ ರೀತಿಯಲ್ಲೂ ಕೊಡುಗೆ ನೀಡಿದ ವಿರಾಟ್ ಕೊಹ್ಲಿಗೆ ಮೊದಲ ಪದಕ ಒಲಿದಿದೆ. ಭಾರತ ತಂಡದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ಕೊಹ್ಲಿಗೆ ಪದಕ ನೀಡಿ ಗೌರವಿಸಿದ್ದು, ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Virat Kohli: ದಾಖಲೆಗಳ ಮೇಲೆ ದಾಖಲೆ ಬರೆದ ಕಿಂಗ್ ಕೊಹ್ಲಿ
ಭಾರತದ ಮುಂದಿನ ಪಂದ್ಯ ಯಾವಾಗ?
ಟೀಮ್ ಇಂಡಿಯಾ ತನ್ನ 2ನೇ ಪಂದ್ಯವನ್ನು ಅಕ್ಟೋಬರ್ 11 ರಂದು ಆಡಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ.