
ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) 37ನೇ ವರ್ಷಕ್ಕೆ ಕಾಲಿಟ್ಟಿದ್ದು, ಪತಿ ವಿರಾಟ್ ಕೊಹ್ಲಿ (Virat Kohli) ತಮ್ಮ ಮನದಾಳದ ಮಾತುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಜನ್ಮ ದಿನದ ಶುಭಾಶಯ ಕೋರಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಡದಿ ಅನುಷ್ಕಾ ಶರ್ಮಾರ ಜನ್ಮ ದಿನಕ್ಕೆ ಶುಭ ಹಾರೈಸಿರುವ ವಿರಾಟ್, ನನ್ನ ಆತ್ಮೀಯ ಸ್ನೇಹಿತೆ, ನನ್ನ ಒಡನಾಡಿ, ನನ್ನ ಸುರಕ್ಷಿತ ಸ್ಥಳ, ನನ್ನ ಆತ್ಮೀಯ ಅರ್ಧ, ನನ್ನ ಎಲ್ಲವೂ. ನೀನು ನಮ್ಮ ಜೀವನದ ಬೆಳಕು. ನಾನು ನಿನ್ನನ್ನು ಪ್ರತಿದಿನ ಹೆಚ್ಚು ಹೆಚ್ಚು ಪ್ರೀತಿಸುವೆ. ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅನುಷ್ಕಾ ಮತ್ತು ವಿರಾಟ್ ಕೊಹ್ಲಿ 2013 ರಲ್ಲಿ ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಆ ಬಳಿಕ ಇಬ್ಬರ ನಡುವೆ ಬೆಳೆದ ಸ್ನೇಹ ಪ್ರೇಮವಾಗಿ ಬದಲಾಯಿತು. ಹೀಗಾಗಿ ಅನುಷ್ಕಾ, ವಿರಾಟ್ ಅವರ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರಲು ಪ್ರಾರಂಭಿಸಿದರು. 2017 ರಲ್ಲಿ ಪ್ರೀತಿಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದ ಈ ಜೋಡಿ ಅದೇ ವರ್ಷ ಅಂದರೆ ಡಿಸೆಂಬರ್ 21, 2017 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಪ್ರಸ್ತುತ ದಂಪತಿಗಳಿಬ್ಬರಿಗೆ ಇಬ್ಬರು ಮಕ್ಕಳಿದ್ದು ಮಗಳಿಗೆ ವಾಮಿಕಾ ಮತ್ತು ಮಗನಿಗೆ ಅಕಾಯ್ ಕೊಹ್ಲಿ ಎಂದು ಹೆಸರಿಟ್ಟಿದ್ದಾರೆ.
ಐಪಿಎಲ್ 2025 ರಲ್ಲಿ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 63.28 ಸರಾಸರಿಯಲ್ಲಿ 443 ರನ್ ಗಳಿಸಿದ್ದು, ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಫಾರ್ಮ್‌ನ ಲಾಭ ಪಡೆದಿದೆ. ತಂಡವು ಇದುವರೆಗೆ 7 ಪಂದ್ಯಗಳನ್ನು ಗೆದ್ದು 14 ಅಂಕಗಳನ್ನು ಗಳಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 3 ರ ಶನಿವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಅಧಿಕೃತವಾಗಿ ಪ್ಲೇಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Thu, 1 May 25