IPL 2025: ಗೆಲುವು ಖಚಿತವಾಗುತ್ತಿದ್ದಂತೆ ಕಿಂಗ್ ಕೊಹ್ಲಿಯ ಸಂಭ್ರಮ ಹೇಗಿತ್ತು ನೋಡಿ
Virat Kohli's Celebration: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರಿನಲ್ಲಿ ಮೂರು ಸತತ ಸೋಲುಗಳ ಸರಣಿಯನ್ನು ಮುರಿದು ರಾಜಸ್ಥಾನ ರಾಯಲ್ಸ್ ವಿರುದ್ಧ 11 ರನ್‌ಗಳ ಜಯ ಸಾಧಿಸಿದೆ. ಇದು ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ಮೊದಲ ಗೆಲುವಾಗಿದೆ. ಇದೀಗ ವಿರಾಟ್ ಕೊಹ್ಲಿಯ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಿದೆ.
ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನ 18 ನೇ ಆವೃತ್ತಿಯಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. 42ನೇ ಪಂದ್ಯದಲ್ಲಿ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿ ಒಟ್ಟಾರೆ ಆರನೇ ಗೆಲುವು ದಾಖಲಿಸಿದ ಆರ್‌ಸಿಬಿ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಗೆಲುವು ದಾಖಲಿಸಿದ ಸಾಧನೆಯನ್ನು ಮಾಡಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ರಾಜಸ್ಥಾನ ರಾಯಲ್ಸ್‌ಗೆ ಗೆಲ್ಲಲು 206 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 194 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ವಾಸ್ತವವಾಗಿ ರಾಜಸ್ಥಾನ್ ಗೆಲ್ಲಲು ಕೊನೆಯ 2 ಓವರ್‌ಗಳಲ್ಲಿ 18 ರನ್ ಬೇಕಾಗಿದ್ದವು. ಹೀಗಾಗಿ ರಾಜಸ್ಥಾನ್ ತಂಡವೇ ಗೆಲುವಿನ ಫೇವರೇಟ್ ಎನಿಸಿತ್ತು. ಆದರೆ ಹೇಜಲ್ವುಡ್ ಎಸೆದ 19ನೇ ಓವರ್ನಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ಸೋಲಿನ ದವೆಡೆಗೆ ಸಿಲುಕಿತು. ಒಂದೆಡೆ ಆರ್ಸಿಬಿಯ ಗೆಲುವು ಖಚಿತವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಎಂದಿನಂತೆ ತಮ್ಮ ಆಕ್ರಮಣಕಾರಿ ಶೈಲಿಯಲ್ಲಿ ಮೈದಾನದಲ್ಲಿ ಸಂಭ್ರಮಾಚರಣೆ ನಡೆಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.