Lanka Premier League 2023: ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ವನಿಂದು ಹಸರಂಗ (Wanindu Hasaranga) ಭರ್ಜರಿ ಪ್ರದರ್ಶನ ನೀಡಿದ್ದಾರೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಜಾಫ್ನಾ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಿ-ಲವ್ ಕ್ಯಾಂಡಿ ತಂಡದ ನಾಯಕ ವನಿಂದು ಹಸರಂಗ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಜಾಫ್ನಾ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ (0) ಹಾಗೂ ಅಸಲಂಕಾ (5) ಬೇಗನೆ ವಿಕೆಟ್ ಒಪ್ಪಿಸಿದರು.
ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತೌಹಿದ್ ಹೃದಯ್ 19 ರನ್ಗಳಿಸಿದರೆ, ಡೇವಿಡ್ ಮಿಲ್ಲರ್ 21 ರನ್ ಬಾರಿಸಿದರು. ಹಾಗೆಯೇ ಪ್ರಿಯಾಮಲ್ ಪೆರೆರಾ 22 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ಕೊನೆಯ ಓವರ್ಗಳ ವೇಳೆ ಅಬ್ಬರಿಸಿದ ದುನಿತ್ ವೆಲ್ಲಲಾಗೆ 27 ಎಸೆತಗಳಲ್ಲಿ ಅಜೇಯ 38 ರನ್ ಬಾರಿಸಿದರು. ಇದರೊಂದಿಗೆ ಜಾಫ್ನಾ ಕಿಂಗ್ಸ್ ತಂಡದ ಮೊತ್ತ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 117 ಬಂದು ನಿಂತಿತು.
ಬಿ-ಲವ್ ಕ್ಯಾಂಡಿ ಪರ 4 ಓವರ್ ಎಸೆದು ಕೇವಲ 9 ರನ್ ನೀಡಿ ವನಿಂದು ಹಸರಂಗ 3 ವಿಕೆಟ್ ಕಬಳಿಸಿದರು. ಹಾಗೆಯೇ ಎನ್ ಪ್ರದೀಪ್ 3 ವಿಕೆಟ್ ಪಡೆದರೆ, ಮ್ಯಾಥ್ಯೂಸ್ 2 ವಿಕೆಟ್ ಉರುಳಿಸಿದರು.
ಇನ್ನು 118 ರನ್ಗಳ ಸುಲಭ ಗುರಿ ಪಡೆದ ಬಿ-ಲವ್ ಕ್ಯಾಂಡಿ ಪರ ಫಖರ್ ಝಮಾನ್ (42) ಹಾಗೂ ದಿನೇಶ್ ಚಂಡಿಮಲ್ (22) ಉತ್ತಮ ಆರಂಭ ಒದಗಿಸಿದ್ದರು.
ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವನಿಂದು ಹಸರಂಗ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು. ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹಸರಂಗ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅಲ್ಲದೆ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಕೇವಲ 22 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 52 ರನ್ ಬಾರಿಸುವ ಮೂಲಕ ವನಿಂದು ಹಸರಂಗ 13 ಓವರ್ಗಳಲ್ಲಿ ತಂಡವನ್ನು ಗುರಿಮುಟ್ಟಿಸಿದರು. ಈ ಮೂಲಕ ಬಿ-ಲವ್ ಕ್ಯಾಂಡಿ ತಂಡವು 8 ವಿಕೆಟ್ಗಳ ಅಮೋಘ ಗೆಲುವು ತನ್ನದಾಗಿಸಿಕೊಂಡಿತು.
ಬಿ-ಲವ್ ಕ್ಯಾಂಡಿ ಪ್ಲೇಯಿಂಗ್ 11: ಫಖರ್ ಝಮಾನ್ , ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್) , ಕಮಿಂದು ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ಸಹನ್ ಅರಾಚ್ಚಿಗೆ , ವನಿಂದು ಹಸರಂಗ (ನಾಯಕ) , ಆಸಿಫ್ ಅಲಿ , ನುವಾನ್ ಪ್ರದೀಪ್ , ಇಸುರು ಉದಾನ , ಮುಜೀಬ್ ಉರ್ ರೆಹಮಾನ್ , ದುಷ್ಮಂತ ಚಮೀರಾ.
ಇದನ್ನೂ ಓದಿ: Tilak Varma: ದಾಖಲೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ ತಿಲಕ್ ವರ್ಮಾ
ಜಾಫ್ನಾ ಕಿಂಗ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಚರಿತ್ ಅಸಲಂಕಾ , ತೌಹಿದ್ ಹೃದಯ್ , ಪ್ರಿಯಾಮಲ್ ಪೆರೇರಾ , ಡೇವಿಡ್ ಮಿಲ್ಲರ್ , ತಿಸಾರ ಪೆರೇರಾ (ನಾಯಕ) , ದುನಿತ್ ವೆಲ್ಲಲಾಗೆ , ಮಹೇಶ್ ತೀಕ್ಷಣ , ನಾಂದ್ರೆ ಬರ್ಗರ್ , ವಿಜಯಕಾಂತ್ ವ್ಯಾಸಕಾಂತ್ , ನುವಾನ್ ತುಷಾರ.