Washington Sundar: 5 ವರ್ಷಗಳಲ್ಲಿ ಆಡಿದ್ದು ಕೇವಲ 4 ಪಂದ್ಯ: ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡ್ತಾರಾ ಸುಂದರ್?

| Updated By: ಝಾಹಿರ್ ಯೂಸುಫ್

Updated on: Jun 22, 2022 | 4:30 PM

Washington Sundar: ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷದ ಸುಂದರ್ ಅವರು ಗಾಯಗೊಳ್ಳುವ ಮೊದಲು 9 ಪಂದ್ಯಗಳಲ್ಲಿ 101 ರನ್ ಗಳಿಸಿದ್ದರು.

Washington Sundar: 5 ವರ್ಷಗಳಲ್ಲಿ ಆಡಿದ್ದು ಕೇವಲ 4 ಪಂದ್ಯ: ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡ್ತಾರಾ ಸುಂದರ್?
Washington Sundar
Follow us on

ಟೀಮ್ ಇಂಡಿಯಾದಲ್ಲಿ (Team India) ಅವಕಾಶಕ್ಕಾಗಿ ಪೈಪೋಟಿ ಜೋರಾಗಿದೆ. ಅದರಲ್ಲೂ ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022)​ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬರುತ್ತಿದೆ. ಒಂದೆಡೆ ಆಟಗಾರರ ದಂಡೇ ಟೀಮ್ ಇಂಡಿಯಾ ಪರ ಪದಾರ್ಪಣೆಯನ್ನು ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಟಗಾರರು ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ವಾಷಿಂಗ್ಟನ್ ಸುಂದರ್. ಐಪಿಎಲ್​ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ಸುಂದರ್ ಇದೀಗ ಬಹುತೇಕ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಫಿಟ್​ನೆಸ್​ ಅಭ್ಯಾಸದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೆ ಮೈದಾನಕ್ಕೆ ಮರಳಲು ಇಂಗ್ಲೀಷ್ ಕೌಂಟಿ ತಂಡ ಲಂಕಾಶೈರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂದರೆ ಸಂಪೂರ್ಣ ಫಿಟ್​ನೆಸ್ ಸಾಧಿಸಿದ ಬಳಿಕ ವಾಷಿಂಗ್ಟನ್ ಸುಂದರ್ ಕೌಂಟಿ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಲಂಕಾಶೈರ್ ಜೊತೆ ಮಾತುಕತೆ ನಡೆಸಿದ್ದು, ಅತ್ತ ಕಡೆಯಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಸರಣಿ ಆಡುವಾಗ ಸುಂದರ್ ಕೌಂಟಿ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷದ ಸುಂದರ್ ಗಾಯಗೊಳ್ಳುವ ಮೊದಲು 9 ಪಂದ್ಯಗಳಲ್ಲಿ 101 ರನ್ ಗಳಿಸಿದ್ದರು. ಅಲ್ಲದೆ ಒಟ್ಟು 6 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಆದರೆ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಪರಿಣಾಮ ಅವರು ಆ ಬಳಿಕ ಕಣಕ್ಕಿಳಿದಿರಲಿಲ್ಲ. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಸುಂದರ್ ಇಂಗ್ಲೆಂಡ್​ನಲ್ಲೇ ಪುನರಾಗಮನವನ್ನು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಏಕೆಂದರೆ ಮುಂದಿನ ತಿಂಗಳು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಸೀಮಿತ ಓವರ್​ಗಳ ಸರಣಿ ಆಡಲಿದೆ. ಈ ಸರಣಿಯಲ್ಲಿ ಭಾರತ ತಂಡವು 3 ಟಿ20 ಪಂದ್ಯಗಳನ್ನು ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಇದೇ ವೇಳೆ ಇಂಗ್ಲೆಂಡ್​ನಲ್ಲಿ ಕೌಂಟಿಯಲ್ಲಿ ತೊಡಗಿಸಿಕೊಂಡು ಮಿಂಚಿದರೆ, ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆಯಾಗುವ ಅವಕಾಶ ಸುಂದರ್​ಗೆ ಸಿಗಬಹುದು. ಇಂತಹದೊಂದು ಭರ್ಜರಿ ಪ್ಲ್ಯಾನ್​ನೊಂದಿಗೆ ವಾಷಿಂಗ್ಟನ್ ಸುಂದರ್ ಲಂಕಾಶೈರ್ ಜೊತೆ ಕಣಕ್ಕಿಳಿಯಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಎಂದರೆ ವಾಷಿಂಗ್ಟನ್ ಸುಂದರ್ 2017 ರಲ್ಲಿ ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಅವರು ಭಾರತದ ಪರ ಆಡಿದ್ದು ಕೇವಲ 4 ಏಕದಿನ ಪಂದ್ಯಗಳನ್ನು ಮಾತ್ರ. ಇದೀಗ ಟಿ20 ವಿಶ್ವಕಪ್ ಹಾಗೂ ಮುಂಬರುವ ಏಕದಿನ ವಿಶ್ವಕಪ್​ಗಾಗಿ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಈಗಲೇ ತಂಡಕ್ಕೆ ಕಂಬ್ಯಾಕ್ ಮಾಡಬೇಕಿದೆ. ಹೀಗಾಗಿಯೇ ವಿದೇಶಿ ಪಿಚ್​ನಲ್ಲಿ ಮಿಂಚುವ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ ತಮಿಳುನಾಡಿನ ಯುವ ಆಲ್​ರೌಂಡರ್.

ಇನ್ನು ಏಕದಿನ ಕ್ರಿಕೆಟ್​ನಲ್ಲಿ 4 ಪಂದ್ಯವಾಡಿದ್ದರೂ, ವಾಷಿಂಗ್ಟನ್ ಸುಂದರ್ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ 31  ಪಂದ್ಯಗಳನ್ನಾಡಿ 25 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಟೆಸ್ಟ್‌ನಲ್ಲಿ 6 ಮತ್ತು ಏಕದಿನದಲ್ಲಿ 5 ವಿಕೆಟ್ ಪಡೆದಿದ್ದಾರೆ. ಇದೀಗ ಟೀಮ್ ಇಂಡಿಯಾದಲ್ಲಿ ಸ್ಪಿನ್ ಆಲ್​ರೌಂಡರ್​ ಆಗಿ ಆಲ್​ರೌಂಡರ್ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದು, ಹಾಗೆಯೇ ಮಧ್ಯಮ ವೇಗಿ ಆಲ್​ರೌಂಡರ್​ ಆಗಿ ಹಾರ್ದಿಕ್ ಪಾಂಡ್ಯ ಕಂಬಾಕ್ ಮಾಡಿದ್ದಾರೆ. ಇನ್ನು ಮತ್ತೋರ್ವ ಸ್ಪಿನ್ ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್​ಗಳ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ವಾಷಿಂಗ್ಟನ್ ಸುಂದರ್​ಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.