ಒಂದೇ ಒಂದು ಬಾಲ್ ಎದುರಿಸದೆ ಬೌಲ್ಡ್ ಆದ ಡಾಟಿನ್; ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಔಟ್

ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್ ಅಪರೂಪದ 'ಟೈಮ್ಡ್ ಔಟ್'ಗೆ ಬಲಿಯಾಗಿದ್ದಾರೆ. ಬ್ಯಾಟಿಂಗ್‌ಗೆ ಬಂದು 75 ಸೆಕೆಂಡುಗಳ ಕಾಲಮಿತಿ ಮೀರಿದ್ದರಿಂದ, 'ಫ್ರೀ ಹಿಟ್ ಎಟ್ ಸ್ಟಂಪ್ಸ್' ನಿಯಮದಡಿ ಅವರನ್ನು ಔಟ್ ಎಂದು ಘೋಷಿಸಲಾಯಿತು. ಒಂದೇ ಒಂದು ಎಸೆತ ಎದುರಿಸದೆ ಡಾಟಿನ್ ವಿಕೆಟ್ ಕಳೆದುಕೊಂಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಈ ವಿಚಿತ್ರ ಘಟನೆ ಕುತೂಹಲ ಮೂಡಿಸಿದೆ.

ಒಂದೇ ಒಂದು ಬಾಲ್ ಎದುರಿಸದೆ ಬೌಲ್ಡ್ ಆದ ಡಾಟಿನ್; ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಔಟ್
Deandra Dottin

Updated on: Nov 25, 2026 | 9:15 PM

ಕ್ರಿಕೆಟ್ ಮೈದಾನದಲ್ಲಿ ಹಲವು ರೀತಿಯ ಔಟ್‌ಗಳನ್ನು ನೋಡಿರುತ್ತೇವೆ. ಆದರೆ ಬ್ಯಾಟರ್ ಕ್ರೀಸ್‌ಗೆ ಬಂದರೂ ಒಂದೇ ಒಂದು ಎಸೆತ ಎದುರಿಸದೆ ಕ್ಲೀನ್ ಬೌಲ್ಡ್ ಆಗಿರುವುದನ್ನು ಎಂದಾದರೂ ನೋಡಿದ್ದೀರಾ? ಇಂತಹದ್ದೊಂದು ಅಪರೂಪದ ಘಟನೆ ಮಹಿಳಾ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ನಡೆದಿದೆ. ಬುಧವಾರ ನಡೆದ ಮೆಲ್ಬೋರ್ನ್ ರೆನೆಗೇಡ್ಸ್ ಮಹಿಳಾ ತಂಡ ಹಾಗೂ ಬ್ರಿಸ್ಬೇನ್ ಹೀಟ್ ಮಹಿಳಾ ತಂಡಗಳ ನಡುವಿನ ಪಂದ್ಯದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಬ್ಯಾಟಿಂಗ್‌ಗೆ ಇಳಿದರೂ ಒಂದೇ ಒಂದು ಎಸೆತ ಎದುರಿಸುವ ಮೊದಲೇ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಸೇರಿದ್ದಾರೆ. ಈ ಮೂಲಕ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ಈ ವಿಶೇಷ ನಿಯಮದಡಿ ಔಟಾದ ಮೊದಲ ಕ್ರಿಕೆಟರ್ ಎಂಬ ಅಪರೂಪದ ದಾಖಲೆಯನ್ನು ಡಾಟಿನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಸಮಯದ ಗಡುವು ಮೀರಿದ ಡಾಟಿನ್

138 ರನ್‌ಗಳ ಗುರಿ ಬೆನ್ನಟ್ಟಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡ 97 ರನ್‌ಗಳಾಗಿದ್ದಾಗ ಜಾರ್ಜಿಯಾ ವೇರ್‌ಹ್ಯಾಮ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಡಿಯಾಂಡ್ರಾ ಡಾಟಿನ್ ಮೈದಾನಕ್ಕೆ ಬಂದರು. ಆದರೆ ಕ್ರೀಸ್ ತಲುಪುವಲ್ಲಿ ಅವರು ಸ್ವಲ್ಪ ತಡ ಮಾಡಿದರು. 75 ಸೆಕೆಂಡ್‌ಗಳ ಸಮಯ ಮುಗಿದರೂ ಡಾಟಿನ್ ಸ್ಕ್ವೇರ್ ಲೆಗ್ ಅಂಪೈರ್ ಬಳಿಯೇ ಇದ್ದರು. ಅಷ್ಟೇ ಅಲ್ಲದೆ, ತಮ್ಮ ಬ್ಯಾಟಿಂಗ್ ಗೇರ್ ಹಾಗೂ ಗ್ಲೌಸ್‌ಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂಪೈರ್‌ಗಳು ಸಮಯದ ಗಡುವು ಮೀರಿರುವುದಾಗಿ ಘೋಷಿಸಿದರು.

Loading...

ವಿಕೆಟ್ ಉರುಳಿಸಿದ ಸಾರಾ ಗ್ಲೆನ್

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟರ್ ನಿಗದಿತ ಸಮಯದೊಳಗೆ ಬ್ಯಾಟಿಂಗ್‌ಗೆ ಸಿದ್ಧವಾಗದಿದ್ದರೆ ಟೈಮ್ಡ್ ಔಟ್ ಎಂದು ಘೋಷಿಸಲಾಗುತ್ತದೆ. ಆದರೆ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಟವನ್ನು ವೇಗಗೊಳಿಸಲು ‘ಫ್ರೀ ಹಿಟ್ ಎಟ್ ಸ್ಟಂಪ್ಸ್’ ಎಂಬ ವಿಶೇಷ ನಿಯಮವಿದೆ. ಈ ನಿಯಮದ ಪ್ರಕಾರ, ಹೊಸ ಬ್ಯಾಟರ್ 75 ಸೆಕೆಂಡ್‌ಗಳೊಳಗೆ ಚೆಂಡು ಎದುರಿಸಲು ಸಿದ್ಧವಾಗದಿದ್ದರೆ, ಆ ಬ್ಯಾಟರ್‌ನನ್ನು ಕ್ರೀಸ್‌ನಿಂದ ಹೊರಗಿಟ್ಟು ಬೌಲರ್‌ಗೆ ಖಾಲಿ ಸ್ಟಂಪ್‌ಗಳತ್ತ ಚೆಂಡೆಸೆಯಲು ಅವಕಾಶ ನೀಡಲಾಗುತ್ತದೆ. ಬೌಲರ್ ಎಸೆದ ಚೆಂಡು ಸ್ಟಂಪ್‌ಗೆ ತಗುಲಿದರೆ ಬ್ಯಾಟರ್ ಔಟ್ ಆಗುತ್ತಾರೆ. ಒಂದು ವೇಳೆ ಚೆಂಡು ಸ್ಟಂಪ್‌ಗೆ ತಾಗದಿದ್ದರೆ ಬ್ಯಾಟಿಂಗ್ ಮುಂದುವರಿಸಬಹುದು.

ಡಿಯಾಂಡ್ರಾ ಡಾಟಿನ್ ವಿಚಾರದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಬೌಲರ್ ಸಾರಾ ಗ್ಲೆನ್ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು. ಖಾಲಿ ಸ್ಟಂಪ್‌ಗಳನ್ನೇ ಗುರಿಯಾಗಿಸಿಕೊಂಡು ಎಸೆದ ಚೆಂಡು ವಿಕೆಟ್‌ಗೆ ತಾಗಿತು. ಪರಿಣಾಮ, ಒಂದೇ ಒಂದು ಎಸೆತ ಎದುರಿಸದ ಡಾಟಿನ್ ಗೋಲ್ಡನ್ ಡಕ್ ರೀತಿಯಲ್ಲಿ ನಿರಾಸೆಯಿಂದ ಪೆವಿಲಿಯನ್ ಸೇರಬೇಕಾಯಿತು.

ಈ ಹಿಂದೆಯೂ ವಿಚಿತ್ರ ರೀತಿಯಲ್ಲಿ ಔಟಾಗಿದ್ದ ಡಾಟಿನ್

35 ವರ್ಷದ ಅನುಭವಿ ಆಟಗಾರ್ತಿ ಡಿಯಾಂಡ್ರಾ ಡಾಟಿನ್ ಇಂತಹ ವಿಚಿತ್ರ ರೀತಿಯಲ್ಲಿ ಔಟಾಗಿರುವುದು ಇದೇ ಮೊದಲೇನಲ್ಲ. 2024ರ WBBL ಫೈನಲ್‌ನಲ್ಲಿ ಡಾಟಿನ್ ಡೈಮಂಡ್ ಡಕ್ ಆಗಿ ರನೌಟ್ ಆಗಿದ್ದರು. ಅಂದರೆ ಒಂದೇ ಒಂದು ಎಸೆತ ಎದುರಿಸದೆ ರನ್‌ಔಟ್ ಆಗಿದ್ದರು. ಬಳಿಕ 2026ರ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ನಿಯಮದಡಿ ಔಟಾದ ಮೊದಲ ವೆಸ್ಟ್ ಇಂಡೀಸ್ ಆಟಗಾರ್ತಿ ಎಂಬ ದಾಖಲೆಗೂ ಪಾತ್ರರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
Loading...
Unable to load recommendations.
Follow Us