ಭಾರತದಲ್ಲಿ ಆಯೋಜನೆಯಾಗುತ್ತಿರುವ ಏಕದಿನ ವಿಶ್ವಕಪ್ನಲ್ಲಿ (ODI World Cup 2023) ಯಾವ ಹತ್ತು ತಂಡಗಳು ಅಖಾಡಕ್ಕಿಳಿಯುತ್ತಿವೆ ಎಂಬುದಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಸಮರಕ್ಕೆ ಈ ಹಿಂದೆಯೇ 8 ತಂಡಗಳು ನೇರ ಪ್ರವೇಶ ಪಡೆದಿದ್ದವು. ಇದೀಗ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ (World Cup Qualifiers 2023) ಟೂರ್ನಿಯಲ್ಲಿ ಆಡುವ ಮೂಲಕ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ (sri lanka vs netherlands) ತಂಡಗಳು ತಮ್ಮ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿವೆ. ಜಿಂಬಾಬ್ವೆಯನ್ನು ಸೋಲಿಸಿದ ಶ್ರೀಲಂಕಾ ವಿಶ್ವಕಪ್‌ಗೆ ಅರ್ಹತೆ ಪಡೆದ ಒಂಬತ್ತನೇ ತಂಡವಾದರೆ, ಇತ್ತ ನೆದರ್ಲೆಂಡ್ಸ್, ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿ 12 ವರ್ಷಗಳ ನಂತರ ವಿಶ್ವಕಪ್ ಟಿಕೆಟ್ ಪಡೆದುಕೊಂಡಿದೆ. ಹೀಗಾಗಿ ಈ ಟೂರ್ನಿಯಲ್ಲಿ ಆಡುವ ಹತ್ತು ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ನಡುವೆ ಐಸಿಸಿ ಕ್ವಾಲಿಫೈಯರ್ ಫೈನಲ್ (World Cup Qualifiers 2023 Final) ಪಂದ್ಯ ಇಂದು ನಡೆಯಲಿದೆ.
ಈ ಅರ್ಹತಾ ಪಂದ್ಯಾವಳಿಯ ಗ್ರ್ಯಾಂಡ್ ಫೈನಲ್ ಜುಲೈ 9 ರ ಭಾನುವಾರದಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಪಂದ್ಯ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. ದಸುನ್ ಶನಕ ಶ್ರೀಲಂಕಾವನ್ನು ಮುನ್ನಡೆಸುತ್ತಿದ್ದರೆ, ಸ್ಕಾಟ್ ಎಡ್ವರ್ಡ್ಸ್ ನೆದರ್ಲೆಂಡ್ಸ್ ಕ್ರಿಕೆಟ್ ತಂಡದ ನಾಯಕತ್ವ ಹೊತ್ತಿದ್ದಾರೆ.
SL vs WI: ಸೋಲಿನೊಂದಿಗೆ ಏಕದಿನ ವಿಶ್ವಕಪ್‌ಗೆ ವಿದಾಯ ಹೇಳಿದ ಕೆರಿಬಿಯನ್ ದೈತ್ಯರು..!
ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಸೂಪರ್ ಸಿಕ್ಸ್ ಸುತ್ತಿಗೂ ಮೊದಲು ಲೀಗ್‌ನಲ್ಲಿ ಒಟ್ಟು 10 ತಂಡಗಳು ಭಾಗಿಯಾಗಿದ್ದವು. ಈ 10 ತಂಡಗಳನ್ನು ತಲಾ ಐದರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಅದರಂತೆ ಪ್ರತಿ ತಂಡವು ತಮ್ಮ ಗುಂಪಿನ 4 ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಆಡಿತ್ತು. ತನ್ನ ಗುಂಪಿನಲ್ಲಿ ಸ್ಕಾಟ್ಲೆಂಡ್, ಓಮನ್, ಐರ್ಲೆಂಡ್ ಮತ್ತು ಯುಎಇ ತಂಡಗಳನ್ನು ಎದುರಿಸಿದ್ದ ಶ್ರೀಲಂಕಾ ತಾನು ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ಮತ್ತೊಂದೆಡೆ, ನೆದರ್ಲೆಂಡ್ಸ್ ತಂಡ ಜಿಂಬಾಬ್ವೆ ಹೊರತುಪಡಿಸಿ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಯುಎಸ್ಎ, ನೇಪಾಳ ಮತ್ತು ವಿಂಡೀಸ್ ತಂಡವನ್ನು ಸೋಲಿಸಿತ್ತು.
ಏತನ್ಮಧ್ಯೆ, ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ನಡುವೆ ಸೂಪರ್ 6 ಹಂತದಲ್ಲಿ ಜೂನ್ 30 ರಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ 21 ರನ್‌ಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತು. ಇದಾದ ಬಳಿಕ ಜುಲೈ 9ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಹೀಗಾಗಿ ಇದೀಗ ಶ್ರೀಲಂಕಾ ತಂಡಕ್ಕೆ ನೆದರ್ಲೆಂಡ್ಸ್ ತಂಡವನ್ನು ಸತತ ಎರಡನೇ ಬಾರಿ ಸೋಲಿಸಿ ಚಾಂಪಿಯನ್ ಆಗುವ ಅವಕಾಶ ಸಿಕ್ಕಿದೆ. ಇತ್ತ ನೆದರ್ಲೆಂಡ್ಸ್ಗೆ ಶ್ರೀಲಂಕಾ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವ ರೀತಿಯಲ್ಲಿ ಸೋಲಿನ ಶಾಕ್ ನೀಡುವ ಅವಕಾಶವಿದೆ.
ಶ್ರೀಲಂಕಾ ಕ್ರಿಕೆಟ್ ತಂಡ: ದಿಮುತ್ ಕರುಣಾರತ್ನೆ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ದಸುನ್ ಶನಕ (ನಾಯಕ), ವನಿಂದು ಹಸರಂಗ, ದುಶನ್ ಹೇಮಂತ, ದಿಲ್ಶನ್ ಮಧುಶಂಕ, ಮತೀಶ ಪತಿರಾನ, ಮಹೀಶ್ ತೀಕ್ಷಣ
ನೆದರ್ಲೆಂಡ್ಸ್ ಕ್ರಿಕೆಟ್ ತಂಡ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಒ’ಡೌಡ್, ವೆಸ್ಲಿ ಬ್ಯಾರೆಸಿ, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ಕ್ಲೇಟನ್ ಫ್ಲಾಯ್ಡ್, ರಯಾನ್ ಕ್ಲೈನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:02 am, Sun, 9 July 23