Updated on: Jul 08, 2023 | 8:38 AM
ಐಸಿಸಿ ಕ್ವಾಲಿಫೈಯರ್ ಸೂಪರ್ ಸಿಕ್ಸ್ನ 9ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ 8 ವಿಕೆಟ್‌ಗಳ ಜಯ ಸಾಧಿಸುವುದರೊಂದಿಗೆ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಇತ್ತ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯವನ್ನು ಸೋಲುವುದರೊಂದಿಗೆ ಕೆರಿಬಿಯನ್ ದೈತ್ಯರು ತಮ್ಮ ವಿಶ್ವಕಪ್ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ.
ಸ್ಕಾಟ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 7 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ವೆಸ್ಟ್ ಇಂಡೀಸ್ ತಂಡ ಅಧಿಕೃತವಾಗಿ ವಿಶ್ವಕಪ್ನಿಂದ ಹೊರಬಿದ್ದಿತ್ತು. ಆ ಬಳಿಕ ಔಪಚಾರಿಕವಾಗಿ ಉಳಿದಿದ್ದ ಎರಡು ಪಂದ್ಯಗಳನ್ನಾಡಿದ್ದ ವಿಂಡೀಸ್ ಪಡೆ ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಸೋಲುವುದರೊಂದಿಗೆ ತಮ್ಮ ವಿಶ್ವಕಪ್ ಪ್ರಯಾಣ ಮುಗಿಸಿದೆ.
ಶ್ರೀಲಂಕಾ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯವನ್ನಾಡಿದ ವಿಂಡೀಸ್ ಮೊದಲು ಬ್ಯಾಟಿಂಗ್ ಮಾಡಿ 243 ರನ್ ಕಲೆಹಾಕಿತು. ಮತ್ತೊಮ್ಮೆ ತಂಡದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತ್ತು. ತಂಡದ ಪರ ಕೀಸಿ ಕಾರ್ಟಿ 87 ರನ್ಗಳ ಇನ್ನಿಂಗ್ಸ್ ಆಡಿದರು.
ಇನ್ನು 243 ರನ್ಗಳ ಗುರಿ ಬೆನ್ನಟ್ಟಿದ ಲಂಕಾ 44.2 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 244 ರನ್ ಕಲೆ ಹಾಕಿ ಪಂದ್ಯ ಗೆದ್ದಿತು. ತಂಡದ ಪರ ಆರಂಭಿಕ ಪಾತುಮ್ ನಿಸಂಕ ಶತಕ ಸಿಡಿಸಿ ಮಿಂಚಿದರೆ, ಮತ್ತೊಬ್ಬ ಆರಂಭಿಕ ದಿಮುತ್ ಕರುಣಾರತ್ನೆ 83 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.
ಇನ್ನು ಶ್ರೀಲಂಕಾ ಪರ 10 ಓವರ್‌ಗಳಲ್ಲಿ 34 ರನ್ ನೀಡಿ 4 ವಿಕೆಟ್ ಪಡೆದ ಮಹಿಷ್ ತಿಕ್ಷಣ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವೆಸ್ಟ್ ಇಂಡೀಸ್ ತಂಡ: ಬ್ರ್ಯಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಬ್ರೂಕ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್, ಕೇಸಿ ಕಾರ್ಟಿ, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಕೆವಿನ್ ಸಿಂಕ್ಲೇರ್, ಅಕಿಲ್ ಹೊಸೈನ್
ಶ್ರೀಲಂಕಾ ತಂಡ: ಪಾತುಮ್ ನಿಸಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್, ಸದಿರ ಸಮರವಿಕ್ರಮ, ಚರಿತ್ ಅಸಲಂಕಾ, ಸಹನ್ ಅರಚಿಗೆ, ದಸುನ್ ಶನಕ, ದುಶನ್ ಹೇಮಂತ, ಮಹಿಷ್ ತಿಕ್ಷಣ, ಮತಿಶ ಪತಿರಾನ, ದಿಶಾನ್ ಮಧುಶಂಕ