ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ (Jay Shah) ಅವರು ಏಷ್ಯಾಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದೆ ಬಂತು ಮತ್ತೊಮ್ಮೆ ಪಾಕ್ ಮಂಡಳಿ ಹಾಗೂ ಬಿಸಿಸಿಐ (India and the Pakistan Cricket Board) ನಡುವಿನ ಗುದ್ದಾಟ ಮುನ್ನೆಲೆಗೆ ಬಂದಿದೆ. ಭಾರತ ಕ್ರಿಕೆಟ್ ಎಂದರೆ ಸದಾ ಕತ್ತಿ ಮಸೆಯುವ ಪಾಕ್ ಕ್ರಿಕೆಟ್ ಇದೀಗ ಹೊಸ ಬಾಂಬ್ ಸಿಡಿಸಿದೆ. ಜಯ್ ಶಾ ಎಸಿಸಿಯ 2023/24 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಟ್ವೀಟ್ ಮಾಡಿರುವ ಪಾಕ್ ಮಂಡಳಿಯ ಅಧ್ಯಕ್ಷ ನಜಮ್ ಸೇಥಿ (Najam Sethi) ಎಸಿಸಿ ಅಧ್ಯಕ್ಷರನ್ನು ಟೀಕಿಸಿದ್ದರು. ಎಸಿಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದಂತೆ ಪಿಎಸ್ಎಲ್ ವೇಳಾಪಟ್ಟಿಯನ್ನು ನೀವೇ ಪ್ರಕಟಿಸಿ ಬಿಡಿ ಎಂದಿದ್ದರು. ಇದೀಗ ಮತ್ತೊಂದು ಬಾಂಬ್ ಸಿಡಿಸಿರುವ ನಜಮ್ ಸೇಥಿ ಭಾರತ ಏಷ್ಯಾಕಪ್ (Asia Cup) ಅನ್ನು ತಟಸ್ಥ ಸ್ಥಳದಲ್ಲಿ ಆಡುವುದಾದರೆ, ನಾವು ಕೂಡ ವಿಶ್ವಕಪ್ (World Cup) ಅನ್ನು ತಟಸ್ಥ ಸ್ಥಳದಲ್ಲಿ ಮಾತ್ರ ಆಡುತ್ತೇವೆ ಎಂದಿದ್ದಾರೆ.
ವಾಸ್ತವವಾಗಿ ಈ ಬಾರಿಯ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದೆ. ಹೀಗಾಗಿ ಭಾರತ ಸರ್ಕಾರ ಅನುಮತಿ ನೀಡದ ಕಾರಣ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆದರೆ ಟೀಂ ಇಂಡಿಯಾ ಈ ಪಂದ್ಯಾವಳಿ ಆಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು. ಹೀಗಾಗಿ ಈ ಬಾರಿಯ ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ನಡೆಸುವುದಾಗಿ ಎಸಿಸಿಯ ಅಧ್ಯಕ್ಷರಾಗಿರುವ ಜಯ್ ಶಾ ಅವರೇ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿ ಕೆಂಡವಾಗಿರುವ ನಜಮ್ ಸೇಥಿ, ‘ತಟಸ್ಥ ಸ್ಥಳ ಯಾವುದು? ನಾವು ಆತಿಥ್ಯವಹಿಸಿಕೊಂಡಿರುವ ಪಂದ್ಯಾವಳಿಯನ್ನು ತಟಸ್ಥ ದೇಶದಲ್ಲಿ ಏಕೆ ಆಡಬೇಕು?. ಒಂದು ವೇಳೆ ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವುದಾದರೆ, ಏಕದಿನ ವಿಶ್ವಕಪ್ ಕೂಡ ಬೇರೆ ಸ್ಥಳದಲ್ಲಿ ಆಯೋಜನೆಯಾಕಬೇಕು ಎಂದಿದ್ದಾರೆ. ಅಲ್ಲದೆ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತಕ್ಕೆ ವಿಶ್ವಕಪ್ ಆಡಲು ನಮ್ಮ ತಂಡ ಹೋಗುವುದಾಗಿ ನಜಮ್ ಸೇಥಿ ಹೇಳಿದ್ದಾರೆ. ಒಂದು ವೇಳೆ ನಮ್ಮ ಸರ್ಕಾರದಿಂದ ಇಲ್ಲ ಎಂಬ ಉತ್ತರ ಬಂದರೆ ಪಾಕಿಸ್ತಾನ ತಂಡ, ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಆಡುವುದಿಲ್ಲ’ ಎಂದಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಏಕೆ ಆಡುತ್ತಿಲ್ಲ? ಇಲ್ಲಿದೆ ಪೂರ್ಣ ಸತ್ಯ
ಮುಂದುವರೆದು ಮಾತನಾಡಿರುವ ನಜಮ್ ಸೇಥಿ, ‘2016 ರಲ್ಲಿಯೂ ನಮಗೆ ಭದ್ರತಾ ಸಮಸ್ಯೆಗಳಿದ್ದವು ಆದರೆ ಇದರ ಹೊರತಾಗಿಯೂ ನಾವು ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಹೋಗಿದ್ದೆವು. ಆ ಸಂದರ್ಭದಲ್ಲಿ ನಮ್ಮ ತಂಡ ಆಡಬೇಕಾದ ಪಂದ್ಯಗಳನ್ನು ಕೋಲ್ಕತ್ತಾಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆ ಇಟ್ಟಿದ್ದವು. ಆದರೆ ನಮ್ಮ ಮನವಿಗೆ ಯಾರು ಸ್ಪಂಧಿಸಲಿಲ್ಲ ಎಂದಿದ್ದಾರೆ.
ಹಿಂದಿನ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಕೂಡ ಬಿಸಿಸಿಐ ನಿಲುವನ್ನು ವಿರೋಧಿಸಿದ್ದಲ್ಲದೆ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು. ಪಾಕಿಸ್ತಾನಕ್ಕೆ ಹೋಸ್ಟಿಂಗ್ ಹಕ್ಕನ್ನು ನೀಡುವ ನಿರ್ಧಾರವನ್ನು ಎಸಿಸಿಯ ನಿರ್ದೇಶಕರ ಮಂಡಳಿ ತೆಗೆದುಕೊಂಡಿದೆ. ಹೀಗಾಗಿ ಪಂದ್ಯಾವಳಿಯ ಸ್ಥಳವನ್ನು ಬದಲಾಯಿಸುವ ಬಗ್ಗೆ ಶಾ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ರಾಜಾ ವಾದಿಸಿದ್ದರು. ಆದರೀಗ ಬಿಸಿಸಿಐನ ಮಾಜಿ ಅಧಿಕಾರಿಗಳಿಗೆ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಸೇಥಿ ಕೂಡ ಬಿಸಿಸಿಐ ವಿರುದ್ಧ ಕೆಂಡಕಾರಲು ಆರಂಭಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Fri, 6 January 23