ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ನಾವು ಬಾಝ್ಬಾಲ್ಗೆ ಪ್ರತ್ಯುತ್ತರ ನೀಡಬೇಕಿದೆ… ಹೀಗಂದಿದ್ದು ಮಾತ್ಯಾರೂ ಅಲ್ಲ ಟೀಮ್ ಇಂಡಿಯಾ (Team India) ಕೋಚ್ ರಾಹುಲ್ ದ್ರಾವಿಡ್ (Rahul Dravid). ಆಂಗ್ಲರ ಪಡೆಯ ಆಕ್ರಮಣಕಾರಿ ಆಟಕ್ಕೆ ಪ್ರತಿತಂತ್ರ ರೂಪಿಸಬೇಕಾದ ಅಗತ್ಯತೆ ಇದೆ ಎಂಬುದು ಇದೀಗ ಭಾರತ ತಂಡಕ್ಕೆ ಮನವರಿಕೆಯಾಗಿದೆ.
ಏಕೆಂದರೆ ಹೈದರಾಬಾದ್ನಲ್ಲಿ ನಡೆದ ಈ ಪಂದ್ಯದ ಮೊದಲ ಮೂರು ದಿನದಾಟಗಳಲ್ಲೂ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಇಂಗ್ಲೆಂಡ್ ತಂಡ 28 ರನ್ಗಳ ಜಯಭೇರಿ ಬಾರಿಸಿತ್ತು.
ಈ ಗೆಲುವಿನ ಶ್ರೇಯಸ್ಸು ಇಂಗ್ಲೆಂಡ್ ತಂಡದ ಆಕ್ರಮಣಕಾರಿ ಆಟಕ್ಕೆ (ಬಾಝ್ಬಾಲ್) ಸಲ್ಲುತ್ತದೆ. ಇದೇ ಕಾರಣದಿಂದಾಗಿ ಆಂಗ್ಲರನ್ನು ಸೋಲಿಸಬೇಕಿದ್ದರೆ ಭಾರತ ತಂಡ ಕೂಡ ಬಾಝ್ಬಾಲ್ಗೆ ಪ್ರತ್ಯುತ್ತರ ನೀಡಬೇಕಾದ ಅಗತ್ಯತೆಯಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ನಾವು ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರೂ, ಇಂಗ್ಲೆಂಡ್ ಆಟಗಾರರು ಸ್ವೀಪ್ ಹಾಗೂ ರಿವರ್ಸ್ ಸ್ವೀಪ್ ಶಾಟ್ಗಳನ್ನು ಬಾರಿಸಿದರು. ಹೀಗೆ ಸ್ಥಿರವಾಗಿ ಇಂತಹ ಹೊಡೆತಗಳನ್ನು ಬಾರಿಸಿರುವುದನ್ನು ನಾನಂತು ನೋಡಿಲ್ಲ. ಅದು ಕೂಡ ತಪ್ಪುಗಳನ್ನೇ ಮಾಡದೇ ವೇಗವಾಗಿ ರನ್ಗಳಿಸಿದ್ದಾರೆ. ಇದುವೇ ಇಂಗ್ಲೆಂಡ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಟೀಮ್ ಇಂಡಿಯಾ ಕೋಚ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ತಂಡದ ಇಂತಹ ಅಟ್ಯಾಕಿಂಗ್ ತಂತ್ರಕ್ಕೆ ನಾವು ಕೂಡ ಪ್ರತಿತಂತ್ರ ಹೆಣೆಯಬೇಕಿದೆ. ಬಾಝ್ಬಾಲ್ ಆಟಕ್ಕೆ ನಾವು ಸಹ ಪ್ರತ್ಯುತ್ತರ ಕೊಡಲೇಬೇಕಿದೆ. ಅಂತಹದೊಂದು ಪ್ರತಿಕ್ರಿಯೆಯ ಅಗತ್ಯವಿದೆ. ಇದಕ್ಕಾಗಿ ಮುಂದಿನ ಪಂದ್ಯದಲ್ಲಿ ನಾವು ಸಹ ಒಂದಷ್ಟು ಪ್ಲ್ಯಾನ್ ಮತ್ತು ತಂತ್ರಗಳೊಂದಿಗೆ ಕಣಕ್ಕಿಳಿಯಲಿದ್ದೇವೆ ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ನ್ಯೂಝಿಲೆಂಡ್ನ ಮಾಜಿ ಆಟಗಾರ, ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಂ ಅವರ ಅಡ್ಡ ಹೆಸರು ಬಾಝ್. ಕ್ರಿಕೆಟ್ ಅಂಗಳದಲ್ಲಿ ಬಾಝ್ ಎಂದೇ ಗುರುತಿಸಿಕೊಂಡಿರುವ ಮೆಕಲಂ ಅವರ ಆಕ್ರಮಣಕಾರಿ ಟೆಸ್ಟ್ ಆಟದ ವಿಧಾನವನ್ನು ಇದೀಗ ಬಾಝ್ಬಾಲ್ (BazBall) ಕ್ರಿಕೆಟ್ ಎಂದು ಕರೆಯಲಾಗುತ್ತಿದೆ. ವಿಶೇಷ ಎಂದರೆ ಬಾಝ್ಬಾಲ್ ಆಟ ಶುರು ಮಾಡಿದ ಬಳಿಕ ಇಂಗ್ಲೆಂಡ್ 20 ಟೆಸ್ಟ್ ಪಂದ್ಯಗಳನ್ನಾಡಿದೆ. ಇದರಲ್ಲಿ 14 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು 5 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. ಹಾಗೆಯೇ ಕೇವಲ 1 ಮ್ಯಾಚ್ ಅನ್ನು ಡ್ರಾ ಮಾಡಿಕೊಂಡಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯ ಫೆಬ್ರವರಿ 2 ರಿಂದ ಶುರುವಾಗಲಿದೆ. ಶುಕ್ರವಾರದಿಂದ ಆರಂಭವಾಗಲಿರುವ ಈ ಪಂದ್ಯವು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನೂ ಓದಿ: IND vs ENG 2nd Test: ಟೀಮ್ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ಅಲಭ್ಯ
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸಮಬಲ ಸಾಧಿಸುವ ಇರಾದೆಯಲ್ಲಿದೆ.