
ಪ್ರಸ್ತುತ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ (Australia vs West Indies) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 159 ರನ್‌ಗಳ ಭಾರಿ ಜಯ ದಾಖಲಿಸಿದೆ. ವಾಸ್ತವವಾಗಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಮುಗಿಯುವವರೆಗೂ ವಿಂಡೀಸ್ ತಂಡ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಪಂದ್ಯ ಮುಗಿದ ಬಳಿಕ ಮಾತನಾಡಿರುವ ವಿಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ (Roston Chase), ಪಂದ್ಯದಲ್ಲಿ ಮೂರನೇ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಆಡ್ರಿಯನ್ ಹೋಲ್ಡ್‌ಸ್ಟಾಕ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಆಟಗಾರರಂತೆ ತಪ್ಪು ತೀರ್ಪುಗಳನ್ನು ನೀಡುವ ಅಂಪೈರ್‌ಗೂ ದಂಡ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ವಾಸ್ತವವಾಗಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಈ ಪಂದ್ಯದಲ್ಲಿ, ಮೂರನೇ ಅಂಪೈರ್ ಆಡ್ರಿಯನ್ ಹೋಲ್ಡ್‌ಸ್ಟಾಕ್ ಅವರು ಒಟ್ಟು 5 ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದರು. ಇವುಗಳಲ್ಲಿ 4 ತೀರ್ಪುಗಳು ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆಗಿದ್ದವು. ಅಂಪೈರ್ ಅವರ ಈ ವಿವಾದಾತ್ಮಕ ತೀರ್ಪು ಪಂದ್ಯದ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರಲ್ಲಿ ಒಂದು ನಿರ್ಧಾರ ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ವಿರುದ್ಧವೂ ಆಗಿತ್ತು.
ಇಂತಹ ಪರಿಸ್ಥಿತಿಯಲ್ಲಿ ಪಂದ್ಯ ಮುಗಿದ ಬಳಿಕ ಮಾತನಾಡಿದ ವೆಸ್ಟ್ ಇಂಡೀಸ್‌ನ ನಾಯಕ ರೋಸ್ಟನ್ ಚೇಸ್, ‘ಆಟಗಾರರು ನಿಯಮಗಳನ್ನು ಮುರಿದಾಗ, ನಮಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ, ಕೆಲವೊಮ್ಮೆ ನಮ್ಮನ್ನು ನಿಷೇಧಿಸಲಾಗುತ್ತದೆ. ಆದರೆ ತಪ್ಪು ನಿರ್ಧಾರಗಳನ್ನು ನೀಡುವ ಅಂಪೈರ್‌ಗೆ ಎಂದಿಗೂ ಏನೂ ಆಗುವುದಿಲ್ಲ. ಅವರು ತಪ್ಪು ನಿರ್ಧಾರ ಅಥವಾ ಪ್ರಶ್ನಾರ್ಹ ನಿರ್ಧಾರವನ್ನು ನೀಡಿದ ಹೊರತಾಗಿಯೂ ಅವರನ್ನು ಅಂಪೈರ್ ಆಗಿ ಮುಂದುವರೆಸಲಾಗುತ್ತದೆ.’ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಅಂಪೈರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಾಗೆಯೇ ಆಟಗಾರರಂತೆ ಅಂಪೈರ್‌ಗೂ ತಪ್ಪು ನಿರ್ಧಾರಗಳಿಗೆ ಐಸಿಸಿ ಶಿಕ್ಷೆ ವಿಧಿಸಬೇಕು ಎಂಬುದು ಚೇಸ್ ಅವರ ಅಭಿಪ್ರಾಯವಾಗಿದೆ.
‘ಅಪ್ರಾಪ್ತೆಯೂ ಸೇರಿ 11 ಮಹಿಳೆಯರ ಮೇಲೆ ಅತ್ಯಾಚಾರ’; ವಿಂಡೀಸ್ ಸ್ಟಾರ್ ಕ್ರಿಕೆಟಿಗನ ಮೇಲೆ ಗಂಭೀರ ಆರೋಪ
ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು 180 ರನ್‌ಗಳಿಗೆ ಆಲೌಟ್ ಮಾಡಿದ್ದ ವೆಸ್ಟ್ ಇಂಡೀಸ್, ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೇವಲ 10 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಬಲಿಷ್ಠ ಆಟವಾಡಿ 310 ರನ್ ಕಲೆಹಾಕಿತು. ಕೊನೆಯಲ್ಲಿ ಗೆಲುವಿಗೆ 301 ರನ್‌ಗಳ ಗುರಿ ಪಡೆದ ವೆಸ್ಟ್ ಇಂಡೀಸ್ 141 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯದಲ್ಲಿ ಸೋಲನುಭವಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ