ODI World Cup 2023: ಏಕದಿನ ವಿಶ್ವಕಪ್​ನಿಂದ ವೆಸ್ಟ್ ಇಂಡೀಸ್ ಔಟ್..!

| Updated By: ಝಾಹಿರ್ ಯೂಸುಫ್

Updated on: Jul 01, 2023 | 8:46 PM

West Indies: 182 ರನ್​ಗಳ ಸುಲಭ ಗುರಿ ಪಡೆದ ಸ್ಕಾಟ್ಲೆಂಡ್ ಪರ ಆರಂಭಿಕ ಆಟಗಾರ ಮ್ಯಾಥ್ಯೂ ಕ್ರಾಸ್  3ನೇ ಕಮ್ರಾಂಕದ ಬ್ಯಾಟರ್ ಬ್ರಾಂಡನ್ ಮೆಕ್‌ಮುಲ್ಲೆನ್ ಜೊತೆಗೂಡಿ 125 ರನ್​ಗಳ ಭರ್ಜರಿ ಜೊತೆಯಾಟವಾಡಿದ್ದರು.

ODI World Cup 2023: ಏಕದಿನ ವಿಶ್ವಕಪ್​ನಿಂದ ವೆಸ್ಟ್ ಇಂಡೀಸ್ ಔಟ್..!
West Indies
Follow us on

ODI World Cup 2023: ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್​ ಪಂದ್ಯದಲ್ಲಿ ಸ್ಕಾಟ್​​ಲ್ಯಾಂಡ್ ವಿರುದ್ಧ ಸೋಲುವುದರೊಂದಿಗೆ ವೆಸ್ಟ್ ಇಂಡೀಸ್ (West Indies) ತಂಡವು ಏಕದಿನ ವಿಶ್ವಕಪ್​ನಿಂದ ಹೊರಬಿದ್ದಿದೆ. 1975 ಮತ್ತು 1979 ರಲ್ಲಿ  ವಿಶ್ವ ಚಾಂಪಿಯನ್ ಆಗಿದ್ದ ವಿಂಡೀಸ್ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿರುವುದು ವಿಶೇಷ. ಅಂದರೆ ಕಳೆದ 12 ಏಕದಿನ ವಿಶ್ವಕಪ್​ಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಪಾಲ್ಗೊಂಡಿತ್ತು. ಆದರೆ ಈ ಬಾರಿ ಅರ್ಹತಾ ಸುತ್ತಿನಿಂದಲೇ ನಿರ್ಗಮಿಸುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಈ ಬಾರಿಯ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಯುಎಸ್ಎ ಮತ್ತು ನೇಪಾಳ ವಿರುದ್ಧ ಜಯಗಳಿಸಿತ್ತು. ಆದರೆ ಝಿಂಬಾಬ್ವೆ ಹಾಗೂ ನೆದರ್​ಲ್ಯಾಂಡ್ಸ್ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಇದಾಗ್ಯೂ 2 ಗೆಲುವಿನೊಂದಿಗೆ ಕೆರಿಬಿಯನ್ ಪಡೆ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತಕ್ಕೇರಿತು.

ಆದರೆ ಸೂಪರ್ ಸಿಕ್ಸ್​ನ ಮೊದಲ ಪಂದ್ಯದಲ್ಲೇ ಸ್ಕಾಟ್​ಲ್ಯಾಂಡ್ ವಿರುದ್ಧ ಪರಾಜಯಗೊಂಡಿದೆ. ಇದರೊಂದಿಗೆ ಭಾರತದಲ್ಲಿ ಏಕದಿನ ವಿಶ್ವಕಪ್ ಆಡುವ ವೆಸ್ಟ್ ಇಂಡೀಸ್ ತಂಡದ ಕನಸು ಕಮರಿದೆ.

ಸ್ಕಾಟ್​ಲ್ಯಾಂಡ್​ಗೆ ಐತಿಹಾಸಿಕ ಜಯ:

ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಸ್ಕಾಟ್​ಲ್ಯಾಂಡ್ ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 43.5 ಓವರ್​ಗಳಲ್ಲಿ 181 ರನ್​ಗಳಿಸಿ ಆಲೌಟ್ ಆಯಿತು.

182 ರನ್​ಗಳ ಸುಲಭ ಗುರಿ ಪಡೆದ ಸ್ಕಾಟ್ಲೆಂಡ್ ಪರ ಆರಂಭಿಕ ಆಟಗಾರ ಮ್ಯಾಥ್ಯೂ ಕ್ರಾಸ್  3ನೇ ಕಮ್ರಾಂಕದ ಬ್ಯಾಟರ್ ಬ್ರಾಂಡನ್ ಮೆಕ್‌ಮುಲ್ಲೆನ್ ಜೊತೆಗೂಡಿ 125 ರನ್​ಗಳ ಭರ್ಜರಿ ಜೊತೆಯಾಟವಾಡಿದ್ದರು. ಈ ಹಂತದಲ್ಲಿ 69 ರನ್​ಗಳಿಸಿದ್ದ ಮೆಕ್​ಮುಲ್ಲೆನ್ ಔಟಾದರು.

ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಥ್ಯೂ ಕ್ರಾಸ್ 107 ಎಸೆತಗಳನ್ನು ಎದುರಿಸಿ ಅಜೇಯ 74 ರನ್ ಬಾರಿಸಿದರು. ಈ ಮೂಲಕ 43.3 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ಮುಟ್ಟಿಸುವ ಮೂಲಕ 7 ವಿಕೆಟ್​ಗಳ ಜಯ ತಂದುಕೊಟ್ಟರು.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ಗೆ 8 ತಂಡಗಳು ಫೈನಲ್

ವಿಶೇಷ ಎಂದರೆ ಸ್ಕಾಟ್​ಲ್ಯಾಂಡ್ ತಂಡವು ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಏಕದಿನ ವಿಶ್ವಕಪ್ ಅರ್ಹತಾ ಸುತ್ತು ಆಡಿದ ವೆಸ್ಟ್ ಇಂಡೀಸ್ ತಂಡ ಹೀಗಿದೆ:

ಬ್ರಾಂಡನ್ ಕಿಂಗ್ , ಜಾನ್ಸನ್ ಚಾರ್ಲ್ಸ್ , ಶಮರ್ ಬ್ರೂಕ್ಸ್ , ಶಾಯ್ ಹೋಪ್ (ನಾಯಕ) , ನಿಕೋಲಸ್ ಪೂರನ್ , ಕೈಲ್ ಮೇಯರ್ಸ್ , ಕೆವಿನ್ ಸಿಂಕ್ಲೇರ್ , ಜೇಸನ್ ಹೋಲ್ಡರ್ , ರೊಮಾರಿಯೋ ಶೆಫರ್ಡ್ , ಅಕೀಲ್ ಹೋಸೇನ್ , ಅಲ್ಝಾರಿ ಜೋಸೆಫ್, ರೋವ್​ಮನ್ ಪೊವೆಲ್ , ಕೀಸಿ ಕಾರ್ಟಿ , ಯಾನಿಕ್ ಕ್ಯಾರಿಯಾ , ಕೀಮೋ ಪಾಲ್ , ರೋಸ್ಟನ್ ಚೇಸ್.