Duleep Trophy 2023: ಸೌರಭ್ಗೆ 8 ವಿಕೆಟ್: ಕೇಂದ್ರ ವಲಯಕ್ಕೆ ಭರ್ಜರಿ ಜಯ
Duleep Trophy 2023: ಮುರಾಸಿಂಗ್ ಕೇವಲ 42 ರನ್ಗಳಿಗೆ 5 ವಿಕೆಟ್ ಉರುಳಿಸಿ ಮಿಂಚಿದರು. ಪರಿಣಾಮ ಕೇಂದ್ರ ವಲಯ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 182 ರನ್ಗಳಿಸಿ ಆಲೌಟ್ ಆಯಿತು.
Duleep Trophy 2023: ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ದುಲೀಪ್ ಟ್ರೋಫಿಯ (Duleep Trophy 2023) ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ (Central Zone) ತಂಡವು ಭರ್ಜರಿ ಜಯ ಸಾಧಿಸಿದೆ. ಪೂರ್ವ ವಲಯ (East Zone) ತಂಡದ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇಂದ್ರ ವಲಯ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಮಣಿಶಂಕರ್ ಮುರಾಸಿಂಗ್ ದಾಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಕೇಂದ್ರ ವಲಯದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಇತ್ತ ಮುರಾಸಿಂಗ್ ಕೇವಲ 42 ರನ್ಗಳಿಗೆ 5 ವಿಕೆಟ್ ಉರುಳಿಸಿ ಮಿಂಚಿದರು. ಪರಿಣಾಮ ಕೇಂದ್ರ ವಲಯ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 182 ರನ್ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಪೂರ್ವ ವಲಯ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಅದರಲ್ಲೂ ಪೂರ್ವ ತಂಡದ ಯಾವುದೇ ಬ್ಯಾಟ್ಸ್ಮನ್ ಅನ್ನು ಕ್ರೀಸ್ ಕಚ್ಚಿ ನಿಲ್ಲಲು ಕೇಂದ್ರ ವಲಯದ ಬೌಲರ್ಗಳು ಬಿಡಲಿಲ್ಲ.
ಪರಿಣಾಮ ಪೂರ್ವ ವಲಯ ತಂಡವು 100 ರನ್ಗಳಿಸುವಷ್ಟರಲ್ಲಿ ಪ್ರಮುಖ 7 ವಿಕೆಟ್ ಕಳೆದುಕೊಂಡಿತು. ಇತ್ತ ಅವೇಶ್ ಖಾನ್ ಹಾಗೂ ಸೌರಭ್ ಕುಮಾರ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ನಾಯಕ ಶಿವಂ ಮಾವಿ 2 ವಿಕೆಟ್ ಕಬಳಿಸಿದರು. ಇದರೊಂದಿಗೆ ಪೂರ್ವ ವಲಯ ತಂಡವು ಕೇವಲ 122 ರನ್ಗಳಿಗೆ ಸರ್ವಪತನ ಕಂಡಿತು.
60 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕೇಂದ್ರ ವಲಯದ ಪರ ಆರಂಭಿಕರಾದ ಇಮಾಂಶು ಮಂತ್ರಿ (68) ಹಾಗೂ ವಿವೇಕ್ ಸಿಂಗ್ (56) ಅರ್ಧಶತಕ ಬಾರಿಸಿ ಮಿಂಚಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಮತ್ತೊಮ್ಮೆ ವಿಫಲರಾಗುವುದರೊಂದಿಗೆ ಕೇಂದ್ರ ವಲಯ 2ನೇ ಇನಿಂಗ್ಸ್ ಅನ್ನು 239 ರನ್ಗಳಿಗೆ ಅಂತ್ಯಗೊಳಿಸಿತು.
ಪ್ರಥಮ ಇನಿಂಗ್ಸ್ ಹಿನ್ನಡೆಯೊಂದಿಗೆ 300 ರನ್ಗಳ ಗುರಿ ಪಡೆದ ಪೂರ್ವ ವಲಯ ತಂಡವು ಸೌರಭ್ ಕುಮಾರ್ ಸ್ಪಿನ್ ದಾಳಿಗೆ ತತ್ತರಿಸಿತು. 12.4 ಓವರ್ ಮಾಡಿದ ಸೌರಭ್ ಕೇವಲ 33 ರನ್ ನೀಡಿ 8 ವಿಕೆಟ್ ಕಬಳಿಸಿದರು. ಈ ಮೂಲಕ ಪೂರ್ವ ವಲಯ ತಂಡವನ್ನು ಕೇವಲ 129 ರನ್ಗಳಿಗೆ ಆಲೌಟ್ ಮಾಡಿ ಕೇಂದ್ರ ವಲಯ ತಂಡ 170 ರನ್ಗಳ ಭರ್ಜರಿ ಜಯ ಸಾಧಿಸಿತು.
ಕೇಂದ್ರ ವಲಯ ಪ್ಲೇಯಿಂಗ್ 11: ಹಿಮಾಂಶು ಮಂತ್ರಿ , ಶುಭಂ ಎಸ್ ಶರ್ಮಾ , ಕುನಾಲ್ ಚಂದೇಲಾ , ವಿವೇಕ್ ಸಿಂಗ್ , ಸರನ್ಶ್ ಜೈನ್ , ರಿಂಕು ಸಿಂಗ್ , ಉಪೇಂದ್ರ ಯಾದವ್ (ವಿಕೆಟ್ ಕೀಪರ್) , ಶಿವಂ ಮಾವಿ (ನಾಯಕ) , ಸೌರಭ್ ಕುಮಾರ್ , ಅವೇಶ್ ಖಾನ್ , ಯಶ್ ಠಾಕೂರ್.
ಇದನ್ನೂ ಓದಿ: ODI World Cup 2023: ಚೆಪಾಕ್ ಮತ್ತು ಆಸ್ಟ್ರೇಲಿಯಾ: ಟೀಮ್ ಇಂಡಿಯಾಗೆ ಚಿಂತೆ ಶುರು..!
ಪೂರ್ವ ವಲಯ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ (ನಾಯಕ) , ಸುದೀಪ್ ಕುಮಾರ್ ಘರಾಮಿ , ಅನುಸ್ತುಪ್ ಮಜುಂದಾರ್ , ರಿಯಾನ್ ಪರಾಗ್ , ಮಣಿಶಂಕರ್ ಮುರಾಸಿಂಗ್ , ಶಹಬಾಜ್ ಅಹ್ಮದ್ , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ನದೀಮ್ , ಆಕಾಶ್ ದೀಪ್ , ಶಾಂತನು ಮಿಶ್ರಾ , ಇಶಾನ್ ಪೊರೆಲ್.